ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸುಶೀಲ್ ಮೋದಿ
ಪಾಟ್ನಾ : "ಎಲ್ಲಾ ಕಳ್ಳರಿಗೆ ಮೋದಿ ಉಪನಾಮಯಿದೆ'' ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಗುರುವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಹಿರಿಯ ಬಿಜೆಪಿ ನಾಯಕರೂ ಆಗಿರುವ ಸುಶೀಲ್ ಮೋದಿ ಅವರ ವಕೀಲರು ಪಾಟ್ನಾದ ಸಿಜೆಎಂ ನ್ಯಾಯಾಲಯದಲ್ಲಿ ಐಪಿಸಿಯ ಸೆಕ್ಷನ್ 500 ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಈ ಪ್ರರಣದ ವಿಚಾರಣೆಯನ್ನು ನ್ಯಾಯಾಲಯ ಎಪ್ರಿಲ್ 22ರಂದು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ.
ಮೋದಿ ಎಂಬ ಉಪನಾಮವಿರುವ ಎಲ್ಲರ ಭಾವನೆಗಳನ್ನೂ ರಾಹುಲ್ ಗಾಂಧಿ ಅವರ ಹೇಳಿಕೆ ಘಾಸಿಗೊಳಿಸಿರುವ ಹೊರತಾಗಿ ಅವರ ಗೌರವಕ್ಕೂ ಚ್ಯುತಿ ತಂದಿರುವುದರಿಂದ ತಾವು ರಾಹುಲ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸುಶೀಲ್ ಮೋದಿ ಮಂಗಳವಾರ ಘೋಷಿಸಿದ್ದರು. ಈ ಹಿಂದೆ ಅವರು ರಾಹುಲ್ ಗಾಂಧಿಯ `ಚೌಕೀದಾರ್ ಚೋರ್ ಹೈ' ಘೋಷಣೆಯ ವಿರುದ್ಧವೂ ಆಕ್ಷೇಪವೆತ್ತಿದ್ದರು.
Next Story