ಜೆಟ್ ಏರ್ವೇಸ್ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಕ್ರಮ: ಜೇಟ್ಲಿ ಭರವಸೆ
ಹೊಸದಿಲ್ಲಿ, ಎ.21: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್ವೇಸ್ನ ಅಧಿಕಾರಿಗಳ ನಿಯೋಗವು ಶನಿವಾರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ ಬಿಡ್ಡಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹಾಗೂ ಸಿಬ್ಬಂದಿಗಳ ಬಾಕಿ ವೇತನವನ್ನು ಶೀಘ್ರ ಪಾವತಿಸುವಂತೆ ಮನವಿ ಮಾಡಿಕೊಂಡಿತು ಎಂದು ಜೆಟ್ ಏರ್ವೇಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ ಹೇಳಿದ್ದಾರೆ.
ಮುಂದಿನ ಐದು ವಾರದೊಳಗೆ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವುದಾಗಿ ಹಾಗೂ ಸಿಬ್ಬಂದಿಗಳಿಗೆ ನಾಲ್ಕು ತಿಂಗಳಿಂದ ವೇತನ ಬಾಕಿಯಿರುವ ಬಗ್ಗೆ ಬ್ಯಾಂಕ್ಗಳೊಂದಿಗೆ ಮಾತುಕತೆ ನಡೆಸಿ ತ್ವರಿತ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ಸಚಿವರು, ಸಿಬ್ಬಂದಿಗಳನ್ನು ರಕ್ಷಿಸುವುದು ತನ್ನ ಮೊದಲ ಉದ್ದೇಶವಾಗಿದೆ ಎಂದಿದ್ದಾರೆ. ನಿಯೋಗದಲ್ಲಿ ಮಹಾರಾಷ್ಟ್ರದ ವಿತ್ತಸಚಿವ ಸುಧೀರ್ ಮುಂಗಟಿವಾರ್, ಜೆಟ್ ಏರ್ವೇಸ್ನ ಮುಖ್ಯ ಆರ್ಥಿಕ ಅಧಿಕಾರಿ ಅಮಿತ್ ಅಗರ್ವಾಲ್ ಇದ್ದರು ಎಂದು ದುಬೆ ತಿಳಿಸಿದ್ದಾರೆ.
ಸಚಿವರ ಭರವಸೆ ಹಿನ್ನೆಲೆಯಲ್ಲಿ ಜೆಟ್ ಏರ್ವೇಸ್ನ ಸಿಬ್ಬಂದಿಗಳು ಪ್ರತಿಭಟನೆ ಅಂತ್ಯಗೊಳಿಸುವರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದುಬೆ, ದಯವಿಟ್ಟು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. 25 ವರ್ಷಕ್ಕೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಉದ್ಯೋಗಿಗಳಿಗೆ ಸಂಬಂಧಿಸಿದ ಭಾವನಾತ್ಮಕ ವಿಷಯ ಇದಾಗಿದೆ ಎಂದರು.