ಚುನಾವಣೆ ಮುಗಿಯುವವರೆಗೂ ಚಿತ್ರದ ಮೇಲಿನ ನಿಷೇಧ ತೆರವುಗೊಳಿಸಲು ಸುಪ್ರೀಂ ಕೋರ್ಟ್ ನಕಾರ
ನರೇಂದ್ರ ಮೋದಿ ಬಯೊಪಿಕ್
ಹೊಸದಿಲ್ಲಿ,ಎ.26: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ ‘ಪಿಎಂ ನರೇಂದ್ರ ಮೋದಿ’ ಪ್ರದರ್ಶನವನ್ನು ಚುನಾವಣೆಗಳು ಅಂತ್ಯಗೊಳ್ಳುವವರೆಗೂ ನಿಷೇಧಿಸಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.
ಈ ವಿಷಯದಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮು.ನ್ಯಾ.ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರ ಪೀಠವು ಸ್ಪಷ್ಟಪಡಿಸಿತು.
ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದ್ದ ಚುನಾವಣಾ ಆಯೋಗವು,ಚುನಾವಣೆಗಳು ನಡೆಯುತ್ತಿರುವಾಗ ಚಿತ್ರದ ಸಾರ್ವಜನಿಕ ಪ್ರದರ್ಶನವು ಚುನಾವಣಾ ಸಮತೋಲನವನ್ನು ಕೆಡಿಸುತ್ತದೆ ಎಂದು ತಿಳಿಸಿತ್ತು. ಆಯೋಗವು ರಚಿಸಿದ್ದ ಸಮಿತಿಯೊಂದು ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿ ವರದಿಯನ್ನು ಸಲ್ಲಿಸಿತ್ತು.
ಚಿತ್ರಕಥೆಯೊಂದಿಗೆ ಒದಗಿಸಲಾಗಿದ್ದ ಚಿತ್ರದ ಸಾರಾಂಶದಲ್ಲಿನ ‘ಇಂಡಿಯಾ ಅಂದರೆ ಮೋದಿ ಮತ್ತು ಮೋದಿ ಅಂದರೆ ಇಂಡಿಯಾ’ಎಂಬ ಸಾಲನ್ನು ಉಲ್ಲೇಖಿಸಿರುವ ವರದಿಯು, ಇದು ಕಾಂಗ್ರೆಸ್ ನಾಯಕ ಡಿ.ಕೆ.ಬರುವಾ ಅವರು 1970ರ ದಶಕದಲ್ಲಿ ನೀಡಿದ್ದ ‘ಇಂದಿರಾ ಅಂದರೆ ಇಂಡಿಯಾ ಮತ್ತು ಇಂಡಿಯಾ ಅಂದರೆ ಇಂದಿರಾ’ ಎಂಬ ಕುಖ್ಯಾತ ಹೇಳಿಕೆಯನ್ನು ನೆನಪಿಸುತ್ತಿದೆ ಎಂದು ತಿಳಿಸಿದೆ.
ಆಯೋಗವು ಚಿತ್ರದ ಪ್ರದರ್ಶನವನ್ನು ಮೇ 19ರವರೆಗೆ ನಿಷೇಧಿಸಿ ಎ.10ರಂದು ಆದೇಶಿಸಿತ್ತು.