ಜಗತ್ತಿನ ಬಹುದೊಡ್ಡ ನಟ ಪ್ರಧಾನಿ ಮೋದಿ: ಪ್ರಿಯಾಂಕಾ ಗಾಂಧಿ ವ್ಯಂಗ್ಯ
ಮಿರ್ಝಾಪುರ,ಮೇ.17: ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಬಹುದೊಡ್ಡ ನಟ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣಾ ಅಭಿಯಾನದ ಅಂತಿಮ ದಿನವಾದ ಗುರುವಾರ ಉತ್ತರ ಪ್ರದೇಶದ ಮಿರ್ಝಾಪುರದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ನೀವು ಜಗತ್ತಿನ ಬಹುದೊಡ್ಡ ನಟನಿಗೆ ಮತ ಹಾಕಿದ್ದೀರಿ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನೀವು ನಟ ಅಮಿತಾಬ್ ಬಚ್ಚನ್ ಅವರನ್ನೂ ಆಯ್ಕೆ ಮಾಡಬಹುದಿತ್ತು. ಯಾರೇ ಆಗಲೀ ನಿಮಗಾಗಿ ಏನನ್ನೂ ಮಾಡಲಾರರು ಎಂದು ಕುಟುಕಿದ್ದಾರೆ.
ನಟ ಅಮಿತಾಬ್ ಬಚ್ಚನ್ ಒಂದೊಮ್ಮೆ ಪ್ರಿಯಾಂಕಾ ಗಾಂಧಿ ತಂದೆ ರಾಜೀವ್ ಗಂಧಿಯ ಆಪ್ತಸ್ನೇಹಿತರಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 1984ರಲ್ಲಿ ರಾಜೀವ್ ಗಾಂಧಿ ಅವರ ಒತ್ತಾಯಕ್ಕೆ ಅಮಿತಾಬ್ ಉತ್ತರ ಪ್ರದೇಶದ ಅಲಹಾಬಾದ್ನಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆದರೆ ನಂತರ ಬೋಫೋರ್ಸ್ ಹಗರಣದಲ್ಲಿ ತನ್ನ ಹೆಸರು ಕೇಳಿಬಂದ ನಂತರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಕಾಂಗ್ರೆಸ್ ಮತ್ತು ಬಚ್ಚನ್ ಸಂಬಂಧ ಹಳಸಲು ತೊಡಗಿತ್ತು.
ನಂತರ ಬಚ್ಚನ್ ಪತ್ನಿ ನಟಿ ಜಯಾ ಬಚ್ಚನ್ ಸಮಾಜವಾದಿ ಪಕ್ಷ ಸೇರುವ ಮೂಲಕ ಗಾಂಧಿ ಮತ್ತು ಬಚ್ಚನ್ ಕುಟುಂಬಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತಷ್ಟು ಹೆಚ್ಚಾದವು. ಮುಂದೆ, ಅಮಿತಾಬ್ ಬಚ್ಚನ್ ಗುಜರಾತ್ ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯಾದ ನಂತರವಂತೂ ಅವರು ಬಿಜೆಪಿ ಸಮೀಪವಾಗುತ್ತಿದ್ದಾರೆ ಎಂದೇ ಮಾಧ್ಯಮಗಳು ವರದಿ ಮಾಡಿದ್ದವು.