ಅಮೇಠಿ ಲೋಕಸಭಾ ಉಪ ಚುನಾವಣೆ ಸ್ಪರ್ಧೆಯ ಸುಳಿವು ನೀಡಿದ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ, ಮೇ 18: ಪಕ್ಷದ ಅಧ್ಯಕ್ಷ ಹಾಗೂ ಸಹೋದರ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಎರಡೂ ಕ್ಷೇತ್ರಗಳಲ್ಲೂ ಜಯ ಸಾಧಿಸಿದ ಸನ್ನಿವೇಶದಲ್ಲಿ ತಾನು ಅಮೇಠಿ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸುಳಿವು ನೀಡಿದ್ದಾರೆ.
ರಾಹುಲ್ ಗಾಂಧಿ ಕೇರಳದ ವಯನಾಡು ಹಾಗೂ ಉತ್ತರಪ್ರದೇಶದ ಅಮೇಠಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅಮೇಠಿ ಗಾಂಧಿ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಯಾಗಿದೆ.
ರಾಹುಲ್ ಗಾಂಧಿ ಒಂದು ವೇಳೆ ಅಮೇಠಿ ಹಾಗೂ ಕೇರಳದ ವಯನಾಡ್ನಿಂದ ಗೆಲುವು ಸಾಧಿಸಿದರೆ ಅಂತಹ ಸನ್ನಿವೇಶದಲ್ಲಿ ನೀವು ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ? ಎಂದು ‘ಹಿಂದೂಸ್ತಾನ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ ಪ್ರಿಯಾಂಕಾ,‘‘ಈ ಕುರಿತು ನಿರ್ಧರಿಸಲಾಗುತ್ತದೆ. ನನ್ನ ಸಹೋದರ ಒಂದು ಕ್ಷೇತ್ರವನ್ನು ಬಿಡಲು ನಿರ್ಧರಿಸಿದ ಬಳಿಕ ಈ ಕುರಿತು ಚರ್ಚೆ ನಡೆಸಲಾಗುವುದು’’ ಎಂದು ಉತ್ತರಿಸಿದರು.