ಬಾಲಕಿಯ ಅತ್ಯಾಚಾರ ಆರೋಪಿಯ ಥಳಿಸಿ ಹತ್ಯೆ
ಜೈಪುರ, ಮೇ 18: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಯುವಕನನ್ನು ಸಂತ್ರಸ್ತ ಬಾಲಕಿಯ ಸಂಬಂಧಿಗಳು ಥಳಿಸಿ ಹತ್ಯೆಗೈದಿರುವ ಘಟನೆ ರಾಜಸ್ತಾನದ ಆಲ್ವಾರ್ನಲ್ಲಿ ನಡೆದಿದೆ.
ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಲ್ಲಿ ಇಬ್ಬರು ತಪ್ಪಿಸಿಕೊಂಡು ಓಡಿದ್ದರೆ ಗುಂಪಿನವರ ಕೈಗೆ ಸಿಕ್ಕಿಬಿದ್ದಿದ್ದ ರಾಹುಲ್ ಎಂಬ ಯುವಕನನ್ನು ಆಕ್ರೋಶಿತ ಗುಂಪು ಥಳಿಸಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವನಾತ್ ಎಂಬ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ರಾಹುಲ್, ಲೋಕೇಶ್ ಹಾಗೂ ರಾಮ್ವೀರ್ ಎಂಬ ಯುವಕರು ಅಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. ಈ ವಿಷಯವನ್ನು ಬಾಲಕಿಯಿಂದ ತಿಳಿದುಕೊಂಡ ಸಂಬಂಧಿಕರು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಲೋಕೇಶ್ ಹಾಗೂ ರಾಮ್ವೀರ್ ತಪ್ಪಿಸಿಕೊಂಡು ಓಡಿದ್ದರೆ ರಾಹುಲ್ ಸಿಕ್ಕಿಬಿದ್ದಿದ್ದಾನೆ.
ಗುಂಪಿನ ಹೊಡೆತದಿಂದ ರಾಹುಲ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಓಡಿ ಹೋದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹರ್ಸೌರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಮತ್ತು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಂಬ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.