ಅನುರಾಗ್ ಕಶ್ಯಪ್ ಪುತ್ರಿಯ ಅತ್ಯಾಚಾರಗೈಯುವ ಬೆದರಿಕೆಯೊಡ್ಡಿದ ಮೋದಿ ಫಾಲೋವರ್
ಪ್ರಧಾನಿಗೆ ಟ್ವೀಟ್ ಮಾಡಿದ ಪ್ರಸಿದ್ಧ ನಿರ್ದೇಶಕ ಹೇಳಿದ್ದು ಹೀಗೆ…
ಮುಂಬೈ, ಮೇ 24: ಗುರುವಾರ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಿದ ಬೆನ್ನಿಗೇ ಹಲವು ಸೆಲೆಬ್ರಿಟಿಗಳು ಅವರಿಗೆ ಟ್ವಿಟ್ಟರಿನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದವರಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಒಬ್ಬರಾಗಿದ್ದಾರೆ. ಆದರೆ ಅದರ ಜತೆಗೆ ಕಶ್ಯಪ್ ಅವರು ಪ್ರಧಾನ ಮಂತ್ರಿಗೆ ಇನ್ನು ಕೆಲ ವಿಷಯಗಳನ್ನೂ ಹೇಳಿದ್ದಾರೆ.
ಪ್ರಧಾನಿ ವಿರುದ್ಧ ಅಸಮ್ಮತಿ ಸೂಚಿಸಿ ದನಿಯೆತ್ತಿದರೆ ಪುತ್ರಿಯ ಅತ್ಯಾಚಾರಗೈಯ್ಯುವುದಾಗಿ ಅನುರಾಗ್ ಕಶ್ಯಪ್ ಅವರಿಗೆ ಪ್ರಧಾನಿಯ ಫಾಲೋವರ್ ಒಬ್ಬ ಬೆದರಿಕೆ ಹಾಕಿದ್ದ. ಇದನ್ನು ಉಲ್ಲೇಖಿಸಿ ಕಶ್ಯಪ್ ಹೀಗೆಂದು ಬರೆದಿದ್ದಾರೆ
“ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ವಿಜಯಕ್ಕೆ ಅಭಿನಂದನೆಗಳು ಹಾಗೂ ಸರ್ವರನ್ನೊಳಗೊಂಡ ಅಭಿವೃದ್ಧಿಯ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು. ಸರ್ ಜತೆಗೆ ಅಸಮ್ಮತಿಯ ಭಾವನೆ ಹೊಂದಿದ್ದೇನೆಂಬ ಕಾರಣಕ್ಕೆ ನನ್ನ ಪುತ್ರಿಗೆ ಇಂತಹ ಸಂದೇಶಗಳೊಂದಿಗೆ ಬೆದರಿಸುವ ಮೂಲಕ ನಿಮ್ಮ ವಿಜಯವನ್ನು ಆಚರಿಸುವ ನಿಮ್ಮ ಇಂತಹ ಫಾಲೋವರ್ಸ್ ಅನ್ನು ಹೇಗೆ ನಿಭಾಯಿಸಬೇಕೆಂದು ಕೂಡ ದಯವಿಟ್ಟು ಹೇಳಿ'' ಎಂದು ಟ್ವೀಟ್ ಮಾಡಿದ್ದಾರಲ್ಲದೆ ಮೋದಿಯ ಫಾಲೋವರ್ ಒಬ್ಬ ಅವರ ಪುತ್ರಿಗೆ ನೀಡಿರುವ ಬೆದರಿಕೆ ಸಂದೇಶದ ಟ್ವೀಟ್ ಅನ್ನೂ ಪೋಸ್ಟ್ ಮಾಡಿದ್ದಾರೆ.