ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಝಾಕಿರ್ ಮೂಸಾ ಹತ್ಯೆ
ಶ್ರೀನಗರ, ಮೇ.24: ಉಗ್ರ ಸಂಘಟನೆ ಅಲ್ ಕಾಯಿದಾದ ಭಾಗವಾಗಿರುವ ಅನ್ಸರ್ ಗಝ್ವತುಲ್ ಹಿಂದ್ನ ಮುಖ್ಯಸ್ಥ ಝಾಕಿರ್ ಮೂಸಾನನ್ನು ಭದ್ರತಾ ಪಡೆ ದಕ್ಷಿಣ ಕಾಶ್ಮೀರದ ತ್ರಾಲ್ನಲ್ಲಿ ಹತ್ಯೆ ಮಾಡಿದೆ ಎಂದು ಶುಕ್ರವಾರ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪುಲ್ವಾಮ ಜಿಲ್ಲೆಯ ತ್ರಾಲ್ನ ದದ್ಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರ ಗುರುವಾರ ರಾತ್ರಿ ತಿಳಿಸಿದ್ದರು. ಎನ್ಕೌಂಟರ್ ನಡೆದ ಸ್ಥಳದಿಂದ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಿಗ್ಗೆ ಹತ್ಯೆಗೀಡಾದ ಉಗ್ರನ ಗುರುತು ಪತ್ತೆಯಾಗಿದ್ದು ಆತನನ್ನು ಝಾಕಿರ್ ಮೂಸಾ ಎಂದು ಗುರುತಿಸಲಾಗಿದೆ ಎಂದು ರಕ್ಷಣಾ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
ದದ್ಸರ ಗ್ರಾಮದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಉಗ್ರರು ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಝಾಕಿರ್ ಮೂಸಾ ಹತ್ಯೆಗೀಡಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story