ಮುಸ್ಲಿಂ ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ
ಶಿಲಾಂಗ್, ಜೂ.7: ಮೇಘಾಲಯದ ಗ್ರಾಮವೊಂದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ನಗ್ನಗೊಳಿಸಿ ಹಲ್ಲೆ ನಡೆಸಿದ ಘಟನೆಯ ವೀಡಿಯೊ ತುಣುಕಿನಲ್ಲಿ ಕಾಣುವ ಓರ್ವ ಹಲ್ಲೆಕೋರನ ಗುರುತು ಪತ್ತೆ ಮಾಡಲಾಗಿದೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ. ಸದ್ಯ ವೈರಲ್ ಆಗಿರುವ ವೀಡಿಯೊ ತುಣುಕಿನಲ್ಲಿ ಸಂತ್ರಸ್ತನನ್ನು ಸುತ್ತುವರಿದಿರುವ ಹಲ್ಲೆಕೋರರು ಆತನ ಮುಖ ಮತ್ತು ಎದೆಗೆ ಕೈಯಿಂದ ಹೊಡೆಯುತ್ತಿರುವ ಮತ್ತು ಗುಪ್ತಾಂಗಕ್ಕೆ ಒದೆಯುತ್ತಿರುವ ಹಾಗೂ ಆ ವ್ಯಕ್ತಿ ತನ್ನನ್ನು ಬಿಟ್ಟುಬಿಡುವಂತೆ ಕೈಮುಗಿದು ಅಂಗಲಾಚುವ ದೃಶ್ಯಗಳು ಸೆರೆಯಾಗಿವೆ.
ಈ ಘಟನೆ ರಾನಿಕೊರ್ ಗ್ರಾಮದಲ್ಲಿ ನಡೆದಿದೆ. ಆದರೆ ಯಾವಾಗ ಈ ಘಟನೆ ನಡೆಯಿತು ಮತ್ತು ಇದಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಹಲ್ಲೆಕೋರನ ಗುರುತು ಪತ್ತೆಯಾಗಿದ್ದು ಹಲ್ಲೆಕೋರರ ಪೈಕಿ ಬಹುತೇಕರು ರಾನಿಕೋರ್ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಸಂತ್ರಸ್ತ ವ್ಯಕ್ತಿಯ ಗುರುತು ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಈ ಹೀನಾಯ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ನಿರ್ದೇಶ ನೀಡಿರುವುದಾಗಿ ಮೇಘಾಲಯ ಪೊಲೀಸ್ ಮುಖ್ಯಸ್ಥ ಆರ್. ಚಂದ್ರನಾಥನ್ ತಿಳಿಸಿದ್ದಾರೆ.