ರಾಂಚಿಯಲ್ಲಿ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮ
ಹೊಸದಿಲ್ಲಿ, ಜೂ.8: ಜೂನ್ 21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮವನ್ನು ಜಾಖರ್ಂಡ್ ರಾಜಧಾನಿ ರಾಂಚಿಯಲ್ಲಿ ಆಯೋಜಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಆಯುಷ್ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜೂನ್ 13ರಂದು ರಾಂಚಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಹಲವು ಉನ್ನತಾಧಿಕಾರಿಗಳು, ಯೋಗ ಸಂಘಟಕರು ಹಾಗೂ ಯೋಗ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ದಿಲ್ಲಿಯಲ್ಲಿ ಪ್ರಧಾನ ಕಾರ್ಯಕ್ರಮ ದಿಲ್ಲಿ ನಗರಪಾಲಿಕೆ ಆಶ್ರಯದಲ್ಲಿ ರಾಜಪಥ್ನಲ್ಲಿ ನಡೆಯಲಿದೆ.
ಅಲ್ಲದೆ ಕೆಂಪು ಕೋಟೆ, ನೆಹರೂ ಪಾರ್ಕ್, ಲೋಧಿ ಗಾರ್ಡನ್, ತಲ್ಕಟೋರ ಗಾರ್ಡನ್, ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವರ್ಣ ಜಯಂತಿ ಪಾರ್ಕ್- ರೋಹಿಣಿ ಮತ್ತು ದ್ವಾರಕಾ ವಿಭಾಗ-11ರಲ್ಲೂ ಯೋಗ ಕಾರ್ಯಕ್ರಮ ನಡೆಯಲಿದೆ ಎಂದು ಆಯುಷ್ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಸಚಿವಾಲಯ, ವಿಭಾಗಗಳು, ಎಲ್ಲಾ ರಾಜ್ಯ ಸರಕಾರಗಳು ಹಾಗೂ ಇತರ ಸಂಬಂಧಿತ ಸಂಸ್ಥೆಗಳು ಸಂಘಟಿತ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಹಾಗೂ ಯೋಗದಿಂದ ಲಭಿಸುವ ಆರೋಗ್ಯಭಾಗ್ಯವನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕು ಎಂದು ಆಯುಷ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಯೋಗ ದಿನಾಚರಣೆಯ ಯಶಸ್ಸಿಗೆ ಕೈಜೋಡಿಸಿರುವ ದೇಶದ ಪ್ರಮುಖ ಯೋಗಗುರುಗಳು ಸಾಮಾನ್ಯ ಯೋಗ ಶಿಷ್ಟಾಚಾರವನ್ನು ರೂಪಿಸಿದ್ದಾರೆ. 45 ನಿಮಿಷಗಳ ಈ ಕಾರ್ಯಕ್ರಮದಲ್ಲಿ ಯೋಗಾಸನಗಳ ಸರಣಿ ಪ್ರದರ್ಶನ ಇರುತ್ತದೆ ಎಂದು ಇಲಾಖೆ ತಿಳಿಸಿದೆ.
ಜೂನ್ 21ರ ಯೋಗದಿನಾಚರಣೆಯ ಸಿದ್ಧತೆಗಾಗಿ ಪ್ರಮುಖ ಉದ್ಯಮ ಸಂಸ್ಥೆಗಳಾದ ಸಿಐಐ, ಎಫ್ಐಸಿಸಿಐ, ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ, ಶಿಕ್ಷಣ ಸಂಸ್ಥೆಗಳಾದ ಸಿಬಿಎಸ್ಇ, ಎನ್ಸಿಇಆರ್ಟಿ, ಯುಜಿಸಿ, ಡಿಎವಿ ಮುಂತಾದ ಸಂಸ್ಥೆಗಳು ಈಗಾಗಲೇ ಹಲವು ಕಾರ್ಯಕ್ರಮ ಹಮ್ಮಿಕೊಂಡಿವೆ.