ಆಲಿಗಢ: ಬಾಲಕಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ನಿಯ ಬಂಧನ
ಲಕ್ನೊ, ಜೂ.9: ಆಲಿಗಢದಲ್ಲಿ ಎರಡೂವರೆ ವರ್ಷದ ಬಾಲಕಿಯನ್ನು ಹತ್ಯೆ ಮಾಡಿರುವ ಪ್ರಕರಣದ ಪ್ರಮುಖ ಆರೋಪಿ ಝಾಹಿದ್ನ ಪತ್ನಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.
ಮೇ 30ರಂದು ತನ್ನ ಮನೆಯ ಹೊರಭಾಗದಲ್ಲಿದ್ದ ಬಾಲಕಿಯನ್ನು ಅಪಹರಿಸಲಾಗಿತ್ತು. ಮೂರು ದಿನಗಳ ಬಳಿಕ ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಝಾಹಿದ್ನ ಮನೆ ಬಳಿಯ ಕಸದ ರಾಶಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಎಸೆಯಲಾಗಿತ್ತು. ಈ ಬಟ್ಟೆ ಝಾಹಿದ್ನ ಪತ್ನಿಯದ್ದು ಎಂದು ಪ್ರಾಥಮಿಕ ತನಿಖೆ ಸಂದರ್ಭ ಬೆಳಕಿಗೆ ಬಂದಿತ್ತು.
ಮೃತ ಬಾಲಕಿಯ ತಾತನಿಂದ ಆರೋಪಿ ಝಾಹಿದ್ 10 ಸಾವಿರ ರೂ. ಸಾಲ ಪಡೆದಿದ್ದು ಸಾಲ ವಾಪಾಸು ಕೇಳಿದಾಗ ಇಬ್ಬರ ಮಧ್ಯೆ ಈ ಹಿಂದೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ಅಪಹರಿಸಿದ್ದ ಆರೋಪಿ ತನ್ನ ಮನೆಗೆ ತಂದು ಅಲ್ಲಿ ಕೊಲೆ ಮಾಡಿದ್ದ. ಈತನ ಪತ್ನಿಗೆ ಹಾಗೂ ಸಹೋದರನಿಗೆ ಝಾಹಿದ್ನ ಕೃತ್ಯದ ಬಗ್ಗೆ ತಿಳಿದಿದ್ದರೂ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಬಂಧಿತರಿಬ್ಬರು ಈ ಪ್ರಕರಣದಲ್ಲಿ ವಹಿಸಿರುವ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಓರ್ವ 2014ರಲ್ಲಿ ತನ್ನ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಬಾಲಕಿಯ ಹತ್ಯೆಯ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ . ಪೊಲೀಸ್ ಪಡೆಯ ಜೊತೆ ಕ್ಷಿಪ್ರ ಕಾರ್ಯಪಡೆ ಹಾಗೂ ಪ್ರಾದೇಶಿಕ ಸಶಸ್ತ್ರ ಪಡೆಯ 8 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬಾಲಕಿಯ ಹತ್ಯೆಯ ಹಿನ್ನೆಲೆಯಲ್ಲಿ ಮಹಾಪಂಚಾಯತ್ ಕರೆಯಬೇಕೆಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಗರದ ಪ್ರಮುಖ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರು ಪೊಲೀಸರ ತನಿಖೆಯ ಬಗ್ಗೆ ತೃಪ್ತಿ ಸೂಚಿಸಿದ್ದಾರೆ ಎಂದಿದ್ದಾರೆ.