ಡಿಸೆಂಬರ್ ತನಕ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಕೆ?
ಹೊಸದಿಲ್ಲಿ, ಜೂ.12: ದೇಶದ ಗೃಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಡಿಸೆಂಬರ್ ಅಂತ್ಯದ ತನಕ ಅಧ್ಯಕ್ಷ ಪದವಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
ಪಕ್ಷದ ಸಂಘಟನಾ ಚುನಾವಣೆ ಮುಗಿಯುವ ತನಕ ಶಾ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿಯ ಚುನಾವಣೆಯ ಪ್ರಕ್ರಿಯೆಯ ಕುರಿತು ಗುರುವಾರ ಪದಾಧಿಕಾರಿಗಳ ಸಭೆಯಲ್ಲಿ ಅಂತಿಮ ರೂಪ ನೀಡಲಾಗುತ್ತದೆ. ಪಕ್ಷದ ಆಂತರಿಕ ಚುನಾವಣೆಯು ಡಿಸೆಂಬರ್ ಅಂತ್ಯಕ್ಕೆ ಕೊನೆಯಾಗಲಿದೆ.
ಶಾ ಗುರುವಾರ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಮುಖ್ಯಸ್ಥರು ಹಾಗೂ ರಾಜ್ಯ ಉಸ್ತುವಾರಿ ನಾಯಕರುಗಳೊಂದಿಗೆ ಸಭೆ ನಡೆಸಲಿದ್ದಾರೆ. ಜೂ.18 ರಂದು ತನ್ನ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.
ಪಕ್ಷದ ಕುರಿತ ಪ್ರಮುಖ ನಿರ್ಧಾರ ಕೈಗೊಳ್ಳುವ ಬಿಜೆಪಿಯ ಸಂಸದೀಯ ಸಮಿತಿ ನೂತನ ಅಧ್ಯಕ್ಷ ಅಥವಾ ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ. ಪಕ್ಷದ ಆಂತರಿಕ ಚುನಾವಣೆಯ ಮೇಲೆ ನಿಗಾ ಇಡಲು ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪ್ರಧಾನ ಕಾರ್ಯದರ್ಶಿಯೊಬ್ಬರು ತಿಳಿಸಿದ್ದಾರೆ.