ಉತ್ತರಪ್ರದೇಶ: ಬಂದೂಕು ತೋರಿಸಿ ಇಬ್ಬರು ಬಾಲಕಿಯರ ಸಾಮೂಹಿಕ ಅತ್ಯಾಚಾರ
ಮುಝಪ್ಫರ್ನಗರ್, ಜೂ. 13: ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಬಂದೂಕು ತೋರಿಸಿ ನಾಲ್ವರು ಅತ್ಯಾಚಾರಗೈದ ಘಟನೆ ಮುಝಫರ್ನಗರದಲ್ಲಿ ಮಂಗಳವಾರ ನಡೆದಿದೆ.
ಕೆಸೆರ್ವಾ ಗ್ರಾಮದ ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ನೋಡಲು ಹೋದ ಸಂದರ್ಭ 13 ಹಾಗೂ 15 ವರ್ಷದ ಬಾಲಕಿಯರನ್ನು ದುಷ್ಕರ್ಮಿಗಳು ಅತ್ಯಾಚಾರಗೈದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ಅಲೋಕ್ ಶರ್ಮಾ ಹೇಳಿದ್ದಾರೆ. ನೆರವಿಗೆ ಕೂಗಿಕೊಂಡರೆ ಅಥವಾ ಘಟನೆಯನ್ನು ಬಹಿರಂಗಗೊಳಿಸಿದರೆ ಗುಂಡು ಹಾರಿಸಿ ಹತ್ಯೆಗೈಯಲಾಗುವುದು ಎಂದು ನಾಲ್ವರು ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಂಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಅಪ್ರಾಪ್ತರ ಮೇಲೆ ಅತ್ಯಾಚಾರದ ಹಲವು ಘಟನೆಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್, ಗ್ರಾಮೀಣ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದ್ದಾರೆ.
Next Story