ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲು ವಿಳಂಬಿಸಿದ ಪೊಲೀಸರು: ಆತ್ಮಹತ್ಯೆಗೆ ಶರಣಾದ ಸಂತ್ರಸ್ತೆ
ಲಕ್ನೋ: ಯುವತಿಯೊಬ್ಬಳ ಮೇಲೆ ಒಂದು ತಿಂಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಸಂಬಂಧ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ ಕೆಲವೇ ಗಂಟೆಗಳಲ್ಲಿ 24 ವರ್ಷ ವಯಸ್ಸಿನ ಸಂತ್ರಸ್ತೆ ಬಡೌನ್ ನಲ್ಲಿನ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ಈ ಆತ್ಮಹತ್ಯೆ ಘಟನೆ ರವಿವಾರ ನಡೆದಿದ್ದು ಪೊಲೀಸರು ಸುಸೈಡ್ ನೋಟ್ ಕೂಡ ಪತ್ತೆ ಹಚ್ಚಿದ್ದಾರೆ.
ಮೇ 15ರಂದು ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಕುರಿತಂತೆ ಕ್ರಮ ಕೈಗೊಳ್ಳಲು ಪೊಲೀಸರು ವಿಳಂಬಿಸಿದ್ದೇ ಆಕೆಯ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಸಂತ್ರಸ್ತೆ ವಿವಾಹಿತೆಯಾಗಿದ್ದಾಳೆ. ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದ ಆಕೆ ಮೇ 15ರಂದು ಮಾರ್ಕೆಟ್ ಗೆ ಹೋಗಿದ್ದ ಸಂದರ್ಭದಲ್ಲಿ ಮೂವರು ಸಂಬಂಧಿಕ ವ್ಯಕ್ತಿಗಳು ಆಕೆಯನ್ನು ಸಂಪರ್ಕಿಸಿ ಆಕೆಯ ಪತಿಗೆ ಅಸೌಖ್ಯವಿದೆ ಹಾಗೂ ಆತನನ್ನು ನೋಡಲು ತಾವು ದಿಲ್ಲಿಗೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಅವರ ಮಾತನ್ನು ನಂಬಿದ ಸಂತ್ರಸ್ತೆ ಅವರ ಜತೆ ದಿಲ್ಲಿಗೆ ತೆರಳಲು ನಿರ್ಧರಿಸಿದ್ದಳು.
ಆದರೆ ಆ ಮೂವರು ವ್ಯಕ್ತಿಗಳು ಆಕೆಯನ್ನು ತೆಲಂಗಾಣದ ಸೆಕುಂದರಾಬಾದ್ ನಗರದ ಕೊಠಡಿಯಲ್ಲಿರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಒಂದು ವಾರದ ನಂತರ ಆಕೆಯನ್ನು ಅವರು ದಿಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾಗ ಸಹ ಪ್ರಯಾಣಿಕರೊಬ್ಬರ ಮೊಬೈಲ್ ಫೋನಿನಿಂದ ಹೆತ್ತವರನ್ನು ಸಂಪರ್ಕಿಸಿ ತನಗಾದ ಗತಿಯನ್ನು ಆಕೆ ವಿವರಿಸಿದ್ದಳು. ಆಕೆಯ ತಂದೆ ಕೆಲವು ಮಂದಿ ಇತರರೊಂದಿಗೆ ಅವರ ರೈಲು ಅಲ್ಲಿಗೆ ಆಗಮಿಸುವ ಮೊದಲೇ ದಿಲ್ಲಿಗೆ ತಲುಪಿದ್ದರು, ಅವರನ್ನು ನೋಡಿದ ಕೂಡಲೇ ಆರೋಪಿಗಳು ಪರಾರಿಯಾಗಿದ್ದರು.
ಈ ಘಟನೆ ಸಂಬಂಧ ಸಂತ್ರಸ್ತೆ ಜೂನ್ 15ರಂದು ಬಡೌನ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರೂ ಅಲ್ಲಿನ ಠಾಣಾಧಿಕಾರಿ ದೂರು ದಾಖಲಿಸಲು ನಿರಾಕರಿಸಿದ್ದರು. ಕೊನೆಗೆ ಬರೇಲಿ ವಲಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಎಫ್ಐಆರ್ ರವಿವಾರವಷ್ಟೇ ದಾಖಲಾಗಿತ್ತಲ್ಲದೆ ದೂರು ದಾಖಲಿಸಲು ನಿರಾಕರಿಸಿದ ಠಾಣಾಧಿಕಾರಿಯನ್ನು ವಜಾಗೊಳಿಸಲಾಗಿತ್ತು. ಆದರೆ ಅಷ್ಟರೊಳಗಾಗಿ ಸಂತ್ರಸ್ತೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.