ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರನ ವಿರುದ್ಧ ಅತ್ಯಾಚಾರ, ವಂಚನೆ ಪ್ರಕರಣ ದಾಖಲು
ಮುಂಬೈ, ಜೂ. 18: ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಹಾಗೂ ವಂಚಿಸಿದ ಆರೋಪದಲ್ಲಿ ಸಿಪಿಐ (ಮಾರ್ಕಿಸ್ಟ್) ಯ ಕೇರಳ ಘಟಕದ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿವಾಹವಾಗುವುದಾಗಿ ನಂಬಿಸಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೋಯ್ ವಿನೋದಿನಿ ಬಾಲಕೃಷ್ಣನ್ (37) ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 33ರ ಹರೆಯದ ಮಹಿಳೆಯೋರ್ವರು ಆರೋಪಿಸಿದ್ದಾರೆ.
ಯುಎಇಯಲ್ಲಿ ಉದ್ಯಮ ನಡೆಸುತ್ತಿರುವ ಬಿನೋಯ್ ದುಬೈಯಲ್ಲಿ ಬಾರ್ ಡ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯನ್ನು 2008ರಲ್ಲಿ ಭೇಟಿಯಾಗಿದ್ದರು ಎಂದು ಆರೋಪಿಸಲಾಗಿದೆ. ‘‘2008ರಲ್ಲಿ ತಾನು ಬಾರ್ ಡ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಬಿನೋಯ್ ವಿನೋದಿನಿ ನನ್ನ ಗೆಳೆತನ ಸಂಪಾದಿಸಿದ್ದರು. 2010 ಜುಲೈ 10ರಂದು ನಾನು ಅವರ ಮಗುವಿಗೆ ಜನ್ಮ ನೀಡಿದ್ದೆ. ತನ್ನನ್ನು ವಿವಾಹವಾಗುವುದಾಗಿ ಬಿನೋಯ್ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾನು 2010ರಲ್ಲಿ ಮುಂಬೈಗೆ ಆಗಮಿಸಿದೆ’’ ಎಂದು ಆರೋಪಿಸಿ ಮಹಿಳೆ ಮುಂಬೈ ಒಸಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನ ಮನೆಯ ಬಾಡಿಗೆ ಹಾಗೂ ಜೀವನ ವೆಚ್ಚವನ್ನು ಬಿನೋಯ್ ನೀಡುತ್ತಿದ್ದರು.
ಆದರೆ, ಕೆಲವು ತಿಂಗಳುಗಳ ಬಳಿಕ ಬಾಡಿಗೆ ಹಾಗೂ ಇತರ ವೆಚ್ಚಕ್ಕೆ ಹಣ ನೀಡುವುದನ್ನು ನಿಲ್ಲಿಸಿದರು. ಅನಂತರ ಅವರು ಬೇರೆಯೊಬ್ಬರನ್ನು ವಿವಾಹವಾಗಿರುವುದಾಗಿ 2008ರಲ್ಲಿ ತಿಳಿದು ಬಂತು ಎಂದು ಅವರು ಹೇಳಿದ್ದಾರೆ.
ದೂರು ಸ್ವೀಕರಿಸಿದ ಬಳಿಕ ಓಶಿವಾರ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.