ಇಬ್ಬರು ದಲಿತ ಮಹಿಳೆಯರಿಗೆ ಕಾರು ಢಿಕ್ಕಿ ಹೊಡೆಸಿ ಹತ್ಯೆ
ಲಕ್ನೋ,ಜೂ.25: ಕಾರು ಢಿಕ್ಕಿ ಹೊಡೆಸಿ ಇಬ್ಬರು ಮಹಿಳೆಯರನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಸೋಮವಾರ ನಡೆದಿದೆ. ಆರೋಪಿ ಹತ್ಯೆ ಮಾಡಿದ ಮಹಿಳೆಯರ ಕುಟುಂಬದ ಇನ್ನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆಯಲ್ಲಿ ಕುಟುಂಬದ ಇನ್ನಿಬ್ಬರು ಸದಸ್ಯರು ಗಾಯಗೊಂಡಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ನಮ್ಮ ಕುಟುಂಬದ ಮಹಿಳೆಯರ ಮೇಲೆ 30 ವರ್ಷ ಹರೆಯದ ಮೇಲ್ಜಾತಿಯ ವ್ಯಕ್ತಿ ಕಾರು ಹರಿಸಿ ಹತ್ಯೆಗೈದಿದ್ದಾನೆ. ಇದಕ್ಕೂ ಮೊದಲು ಆತ ನಮ್ಮ ಮನೆಯ 22ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಆರಂಭದಲ್ಲಿ ಇದೊಂದು ಟ್ರಕ್ ಅಪಘಾತ ಎಂದು ನಮಗನಿಸಿತ್ತು. ಆದರೆ ಸದ್ಯ ಮೃತರ ಕುಟುಂಬಸ್ಥರು ಲೈಂಗಿಕ ಕಿರುಕುಳ ಯತ್ನದ ಬಗ್ಗೆ ದೂರು ನೀಡಿದ್ದಾರೆ. ಅದನ್ನು ನಾವು ಎಫ್ಐಆರ್ನಲ್ಲಿ ಸೇರಿಸಿದ್ದೇವೆ ಮತ್ತು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಸಂತ್ರಸ್ತೆಯ ಹೇಳಿಕೆ ಪ್ರಕಾರ, ಆರೋಪಿ ಆಕೆಯನ್ನು ಕಾರಿನೊಳಗೆ ಕುಳಿತುಕೊಳ್ಳುವಂತೆ ತಿಳಿಸಿದ್ದ. ಅದಕ್ಕೆ ಆಕೆ ನಿರಾಕರಿಸಿದಾಗ ಆಕೆಯ ಕುಟುಂಬ ಸದಸ್ಯರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ್ದಾನೆ. ಪೊಲೀಸರು ಹೇಳುವಂತೆ, ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಗಳಲ್ಲಿ ಲೈಂಗಿಕ ಕಿರುಕುಳ ನೀಡಿರುವ ಯಾವುದೇ ದೃಶ್ಯ ದಾಖಲಾಗಿಲ್ಲ. ಆದರೆ ಅತಿವೇಗದಿಂದ ಸಾಗಿದ ಕಾರೊಂದು ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆಯುವ ಮತ್ತು ಸ್ಥಳದಲ್ಲಿ ಜನರು ಸೇರುವ ದೃಶ್ಯಗಳು ದಾಖಲಾಗಿವೆ. ಆರೋಪಿ ಚಲಾಯಿಸುತ್ತಿದ್ದ ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ