ನಟಿ ಕಂಗನಾ ರಾನಾವತ್ ಗೆ ಮಾಧ್ಯಮ ಬಹಿಷ್ಕಾರ
ಮುಂಬೈ, ಜು.10: ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಪತ್ರಕರ್ತರೊಬ್ಬರಿಗೆ ಬೆದರಿಕೆಯೊಡ್ಡಿದ ಬಾಲಿವುಡ್ ನಟಿ ಕಂಗನಾ ರಾನಾವತ್ ಅವರನ್ನು ಬಹಿಷ್ಕರಿಸಲು ಎಂಟರ್ಟೈನ್ಮೆಂಟ್ ಜರ್ನಲಿಸ್ಟ್ಸ್ ಗಿಲ್ಡ್ ಆಫ್ ಇಂಡಿಯಾ ನಿರ್ಧರಿಸಿದೆ. ಮಾನ ಹಾನಿಯಾಗುವಂತೆ ತನ್ನ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆಂದು ಇತ್ತೀಚೆಗೆ ಕಂಗನಾ ಪಿಟಿಐ ಪತ್ರಕರ್ತ ಜಸ್ಟಿನ್ ಜೆ. ರಾವ್ ಅವರ ಮೇಲೆ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಆಕೆಗೆ ಯಾವುದೇ ರೀತಿಯಲ್ಲಿ ಮಾಧ್ಯಮ ಪ್ರಚಾರ ನೀಡದೇ ಇರಲು ಪತ್ರಕರ್ತರ ಈ ಸಂಘಟನೆ ನಿರ್ಧರಿಸಿದೆ.
‘ಜಡ್ಜ್ಮೆಂಟಲ್ ಹೈ ಕ್ಯಾ’ ಎಂಬ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ಚಿತ್ರದ ನಿರ್ಮಾಪಕ ಎಕ್ತಾ ಕಪೂರ್ ಅವರಿಗೆ ಪತ್ರ ಬರೆದಿರುವ ಜರ್ನಲಿಸ್ಟ್ಸ್ ಗಿಲ್ಡ್, ಅವರು ಹಾಗೂ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿಫಿಲ್ಮ್ಸ್ ಕಂಗನಾ ಕೃತ್ಯವನ್ನು ಖಂಡಿಸಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿದೆ.
ಕಂಗನಾ ಮೇಲೆ ಪತ್ರಕರ್ತರ ಸಂಘಟನೆ ಹೇರಿದ ಬಹಿಷ್ಕಾರವು ಚಿತ್ರದ ಕುರಿತಾದ ವರದಿಗಳ ಮೇಲೆ ಪರಿಣಾಮ ಬೀರದು ಎಂದು ಗಿಲ್ಡ್ ಹೇಳಿದೆಯಲ್ಲದೆ, ಕಂಗನಾ ಹೊರತುಪಡಿಸಿ ಚಿತ್ರಕ್ಕೆ ಎಲಾ ರೀತಿಯ ಬೆಂಬಲ ನೀಡುವುದಾಗಿ ಹೇಳಿದೆ.
ನಟಿ ಕಂಗನಾ ಅವರು ಜಸ್ಟಿನ್ ರಾವ್ ಅವರನ್ನು ಕಾರ್ಯಕ್ರಮದಲ್ಲಿ ಬೆದರಿಸಿದ ವೀಡಿಯೋ ವೈರಲ್ ಆಗಿತ್ತು. ಕಂಗನಾ ಹೇಳುತ್ತಿದ್ದರೆನ್ನಲಾದ ಸುಳ್ಳುಗಳನ್ನು ಬಯಲಿಗೆಳೆಯುವಲ್ಲಿ ಜಸ್ಟಿನ್ ಪ್ರಮುಖ ಪಾತ್ರ ವಹಿಸಿದ್ದರೆಂಬುದು ಇಲ್ಲಿ ಗಮನಾರ್ಹ.