ಡಿಎಲ್ಎಫ್, ಭಾರ್ತಿ ಎಂಟರ್ ಪ್ರೈಸಸ್ ಗಳ ಟ್ರಸ್ಟ್ ನಿಂದ ಬಿಜೆಪಿಗೆ 6 ವರ್ಷಗಳಲ್ಲಿ 600 ಕೋಟಿ ರೂ. ದೇಣಿಗೆ!
ಹೊಸದಿಲ್ಲಿ, ಜು.15: ಡಿಎಲ್ಎಫ್ ಲಿಮಿಟೆಡ್ ಹಾಗೂ ಭಾರ್ತಿ ಎಂಟರ್ ಪ್ರೈಸಸ್ ಸೇರಿದಂತೆ ಕೆಲವು ನಿರ್ದಿಷ್ಟ ಕಂಪೆನಿಗಳು ಬಿಜೆಪಿಗೆ ಆರು ವರ್ಷಗಳ ಅವಧಿಯಲ್ಲಿ ಸುಮಾರು 600 ಕೋಟಿ ರೂ. ದೇಣಿಗೆ ನೀಡಿವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಆರಂಭದಲ್ಲಿ ಸತ್ಯಾ ಇಲೆಕ್ಟೋರಲ್ ಟ್ರಸ್ಟ್ ಎಂಬ ಹೆಸರು ಹೊಂದಿದ ಈ ಗ್ರೂಪ್ ನಂತರ ಪ್ರೂಡೆಂಟ್ ಇಲೆಕ್ಟೋರಲ್ ಟ್ರಸ್ಟ್ ಎಂದು ಹೆಸರು ಬದಲಾಯಿಸಿದ್ದು, 2014ರಿಂದ ಭಾರತದ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಾರ್ಪೊರೇಟ್ ಕಂಪೆನಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಸತತ ಮುಂದುವರಿದಿದೆ ಎಂದು 2004-2005ರಿಂದ 2017-18ರ ತನಕದ ಮೂರು ಪ್ರತ್ಯೇಕ ವಿಶ್ಲೇಷಣಾತ್ಮಕ ಅಧ್ಯಯನಗಳನ್ನಾಧರಿಸಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ತಿಳಿಸಿದೆ.
ಈ ಟ್ರಸ್ಟ್ ಮುಖಾಂತರ ಡಿಎಲ್ಎಫ್ ಹಾಗೂ ಭಾರ್ತಿ ಗ್ರೂಪ್ ಅಗ್ರ ದೇಣಿಗೆದಾರರಾಗಿದ್ದು, ಈ ಮೂಲಕ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುವ ವರ್ಷದ ತನಕ ಅಗ್ರ ಶ್ರೇಯಾಂಕದಲ್ಲಿದ್ದ ಆದಿತ್ಯ ಬಿರ್ಲಾ ಸಮೂಹದ ಜನರಲ್ ಇಲೆಕ್ಟೋರಲ್ ಟ್ರಸ್ಟನ್ನು ಹಿಂದಿಕ್ಕಿದೆ.
ಪ್ರೂಡೆಂಟ್/ಸತ್ಯಾ ಟ್ರಸ್ಟ್ 2012-13ರಿಂದ 2017-18ರ ತನಕ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದವರಲ್ಲಿ ಅಗ್ರ ಸ್ಥಾನದಲ್ಲಿದ್ದರೂ ದೇಣಿಗೆ ಕೇವಲ ರೂ 81.15 ಕೋಟಿಯಷ್ಟಿತ್ತು.