ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿದ್ದರಿಂದ ಅಮೆರಿಕ ಯಾನಗಳ ವೆಚ್ಚ 20 ಲ.ರೂ.ಇಳಿಕೆ:ಏರ್ ಇಂಡಿಯಾ
ಹೊಸದಿಲ್ಲಿ,ಜು.16: ಪಾಕಿಸ್ತಾನವು ಮಂಗಳವಾರ ಭಾರತದ ಎಲ್ಲ ವಾಣಿಜ್ಯಿಕ ವಿಮಾನ ಯಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಅಮೆರಿಕ ಮತ್ತು ಯುರೋಪ್ಗೆ ತೆರಳುವ ತನ್ನ ವಿಮಾನಗಳ ಕಾರ್ಯಾಚರಣೆ ವೆಚ್ಚವು ಅನುಕ್ರಮವಾಗಿ 20 ಲ.ರೂ. ಮತ್ತು 5 ಲ.ರೂ.ಗಳಷ್ಟು ತಗ್ಗುವ ಸಾಧ್ಯತೆಗಳಿವೆ ಎಂದು ಹೇಳಿದೆ.
ಫೆ.26ರಂದು ಬಾಲಾಕೋಟ್ ವಾಯುದಾಳಿಗಳ ಬಳಿಕ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಏರ್ ಇಂಡಿಯಾ ತನ್ನ ವಿವಿಧ ಅಂತರರಾಷ್ಟ್ರೀಯ ವಿಮಾನಯಾನಗಳ ಮಾರ್ಗ ಬದಲಾವಣೆಯಿಂದಾಗಿ ಸುಮಾರು 491 ಕೋ.ರೂ.ಗಳ ನಷ್ಟವನ್ನು ಅನುಭವಿಸಿದೆ.
ಪಾಕ್ ವಾಯುಪ್ರದೇಶವು ಈಗ ಮುಕ್ತಗೊಂಡಿರುವುದರಿಂದ ವಿಮಾನಗಳ ಬಳಕೆ ಹೆಚ್ಚಲಿದೆ ಮತ್ತು ಸಿಬ್ಬಂದಿಗಳ ಅಗತ್ಯ ಶೇ.25ರಷ್ಟು ಕಡಿಮೆಯಾಗಲಿದೆ ಎಂದು ಏರ್ ಇಂಡಿಯಾದ ವಕ್ತಾರರು ಮಂಗಳವಾರ ತಿಳಿಸಿದರು.
ಫೆ.26 ಮತ್ತು ಜು.15ರ ನಡುವೆ ಭಾರತಕ್ಕಾಗಿರುವ 11 ಮಾರ್ಗಗಳ ಪೈಕಿ ಎರಡು ಮಾರ್ಗಗಳನ್ನು ಮಾತ್ರ ಪಾಕಿಸ್ತಾನವು ಮುಕ್ತವಾಗಿರಿಸಿತ್ತು. ಇವೆರಡೂ ಮಾರ್ಗಗಳು ದಕ್ಷಿಣ ಪಾಕಿಸ್ತಾನದ ಮೂಲಕ ಹಾದು ಹೋಗುತ್ತವೆ.