ಸರ್ಕಾರಿ ವೈದ್ಯ ಕಾಲೇಜುಗಳಿಂದ ಸೀಟು ಮಾರಾಟ !
ಹೊಸದಿಲ್ಲಿ: ಭಾರತೀಯರಾಗಿದ್ದು, ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಲ್ಲಿ ನಿಮಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಸಿಗುವುದು ಕನಸು; ಆದರೆ ನೀವು ಅನಿವಾಸಿ ಭಾರತೀಯರಾಗಿದ್ದಲ್ಲಿ ಸುವರ್ಣಾವಕಾಶ !
ಕಾರಣವೇನು ಗೊತ್ತೇ ? ವೈದ್ಯಕೀಯ ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸುತ್ತಿರುವುದು ಕೇವಲ ಖಾಸಗಿ ಕಾಲೇಜುಗಳು ಮಾತ್ರವಲ್ಲ; ಕೆಲ ಸರ್ಕಾರಿ ಕಾಲೇಜುಗಳು ಕೂಡಾ ಈ ವರ್ಗಕ್ಕೆ ಸೇರಿಕೊಂಡಿವೆ. ತಮ್ಮ ಕಾಲೇಜಿಗೆ ಸ್ವಯಂ ಹಣಕಾಸು ಸೌಲಭ್ಯ ಕಲ್ಪಿಸಿಕೊಳ್ಳುವ ಹೆಸರಿನಲ್ಲಿ ಶೇಕಡ 3 ರಿಂದ 15 ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ಮೀಸಲಿರಿಸಲಾಗಿದೆ. ಕೆಲ ಕಾಲೇಜುಗಳಂತೂ "ಆಡಳಿತ ಮಂಡಳಿ ಕೋಟಾ" ಕೂಡಾ ಹೊಂದಿವೆ.
ಗುಜರಾತ್, ರಾಜಸ್ಥಾನ, ಪಂಜಾಬ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳ ಸರ್ಕಾರಿ ಕಾಲೇಜುಗಳಲ್ಲಿ ಎನ್ಆರ್ಐ ಕೋಟಾ ಇದೆ. ಜಾತಿವಾರು ಕೋಟಾಗಿಂತ ಭಿನ್ನವಾಗಿ ಎನ್ಆರ್ಐ ಕೋಟಾಗೆ ಲಕ್ಷಾಂತರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿರುತ್ತದೆ. ಕಾಲೇಜುಗಳ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿಗಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಈ ಕೋಟಾ ಜಾರಿಗೆ ಮುನ್ನ ಇವಕ್ಕೆ ಸರ್ಕಾರಿ ಅನುದಾನಕ್ಕಾಗಿ ಕಾಯಬೇಕಿತ್ತು.
ಗುಜರಾತ್ನಲ್ಲಿ ಗರಿಷ್ಠ ಅಂದರೆ 241 ಎನ್ಆರ್ಐ ಸೀಟುಗಳಿವೆ. ರಾಜಸ್ಥಾನದಲ್ಲಿ 212, ಪಂಜಾಬ್ನಲ್ಲಿ 41, ಪುದುಚೇರಿಯಲ್ಲಿ 22, ಹಿಮಾಚಲ ಪ್ರದೇಶದಲ್ಲಿ 20, ಹರ್ಯಾಣದಲ್ಲಿ 15 ಸೀಟುಗಳಿವೆ.
ಎನ್ಆರ್ಐ ಸೀಟುಗಳು ಕೇವಲ ಎನ್ಆರ್ಐಗಳಿಗೆ ಮಾತ್ರ ಸೀಮಿತವಲ್ಲ. ಎನ್ಆರ್ಐಗಳು ಬೇರೆಯವರಿಗೆ ಪ್ರಾಯೋಜಕತ್ವ ವಹಿಸಲೂ ಅವಕಾಶವಿದೆ. ಹೀಗೆ ಹಲವು ಮಂದಿ ತಮ್ಮ ಕೋಟಾವನ್ನು ಸಂಬಂಧಿಕರ ಮಕ್ಕಳನ್ನು ಸೇರಿಸಲು ಬಳಸಿಕೊಳ್ಳುತ್ತಾರೆ. ಇವರ ಸಂಪೂರ್ಣ ಶುಲ್ಕವನ್ನು ಅವರು ಪ್ರಾಯೋಜಿಸಬೇಕಾಗುತ್ತದೆ. ಆದರೆ ಅನಿವಾಸಿ ಪೋಷಕರು, ನಿಕಟ ಸಂಬಂಧಿಗಳು ಇಲ್ಲದ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಕೋಟಾದ ಲಾಭ ಪಡೆಯುತ್ತಾರೆ ಎಂದು ಅನಿವಾಸಿಯೊಬ್ಬರು ಹೇಳುತ್ತಾರೆ.