ದೇಶದಲ್ಲಿರುವ 21 ಕೇಂದ್ರೀಯ ವಿದ್ಯಾಲಯಗಳ ಕಟ್ಟಡ ಅಸುರಕ್ಷಿತ
ಹೊಸದಿಲ್ಲಿ, ಜು.23: ದೇಶದಲ್ಲಿರುವ 21 ಕೇಂದ್ರೀಯ ವಿದ್ಯಾಲಯಗಳ ಕಟ್ಟಡ ಭಾಗಶಃ ಅಥವಾ ಸಂಪೂರ್ಣ ಅಸುರಕ್ಷಿತವಾಗಿದೆ ಎಂದು ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.
ಇದರಲ್ಲಿ 18 ಭಾಗಶಃ ಅಪಾಯಕಾರಿಯಾಗಿದ್ದರೆ, 3 ಸಂಪೂರ್ಣ ಅಪಾಯಕಾರಿ ಸ್ಥಿತಿಯಲ್ಲಿದೆ. 4 ಅಪಾಯಕಾರಿ ಶಾಲೆಗಳ ಕಟ್ಟಡದ ಬದಲಿ ಕಟ್ಟಡ ನಿಮಾರ್ಣ ಪ್ರಗತಿಯಲ್ಲಿದೆ . ಉಳಿದ 17 ಕಟ್ಟಡಗಳ ದುರಸ್ತಿ ಅಥವಾ ಬದಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗುತ್ತಿಗೆದಾರರಿಂದ ಅಂದಾಜು ಪಟ್ಟಿ ಕೇಳಲಾಗಿದೆ ಎಂದು ಮಾನವಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ (8) ಕಟ್ಟಡಗಳು , ಅಸ್ಸಾಂನಲ್ಲಿ 3 ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಮಹಾರಾಷ್ಟ್ರದಲ್ಲಿರುವ 8 ಕೇಂದ್ರೀಯ ವಿದ್ಯಾಲಯದ ಕಟ್ಟಡಗಳ ಪೈಕಿ ಮೂರು 1960ರ ದಶಕದಲ್ಲಿ ನಿರ್ಮಾಣವಾಗಿವೆ ಎಂದು ಲೆಕ್ಕಪತ್ರ ಪರಿಶೋಧನೆ(ಆಡಿಟ್) ವರದಿಯಲ್ಲಿ ತಿಳಿಸಲಾಗಿದೆ. ಅಪಾಯಕಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬಾರದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶಾಲೆಗಳಿಗೆ ಸೂಚನೆ ನೀಡಿದೆ.
ಉತ್ತರಪ್ರದೇಶ ಮತ್ತು ಗುಜರಾತ್ನಲ್ಲಿ 2 ಕಟ್ಟಡಗಳು, ತ್ರಿಪುರ, ಮೇಘಾಲಯ, ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಸಿಕ್ಕಿಂನಲ್ಲಿ ತಲಾ 1 ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ಆಡಿಟ್ ವರದಿ ತಿಳಿಸಿದೆ.
ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿ 1,206 ಕೇಂದ್ರೀಯ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು ಇದರಲ್ಲಿ 260 ವಿದ್ಯಾಲಯಗಳು ಪ್ರಾಯೋಜಕರು ಒದಗಿಸಿರುವ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.