ಮುಂದಿನ ವರ್ಷ ‘ಸೈನಿಕ ಶಾಲೆ’ ಆರಂಭಿಸಲಿರುವ ಆರೆಸ್ಸೆಸ್!
ಮೊದಲ ಬ್ಯಾಚ್ ನಲ್ಲಿ 160 ವಿದ್ಯಾರ್ಥಿಗಳು
Photo: DNA India
ಹೊಸದಿಲ್ಲಿ, ಜು.29: ಮಕ್ಕಳಿಗೆ ಶಿಕ್ಷಣ ಹಾಗೂ ತರಬೇತಿ ನೀಡುವ ಉದ್ದೇಶದಿಂದ ಆರೆಸ್ಸೆಸ್ ಮುಂದಿನ ವರ್ಷ ಆರ್ಮಿ ಸ್ಕೂಲ್ ತೆರೆಯಲು ನಿರ್ಧರಿಸಿದೆ. ಆರೆಸ್ಸೆಸ್ ಶಿಕ್ಷಣ ಘಟಕ ವಿದ್ಯಾ ಭಾರತಿ ನಡೆಸಲಿರುವ ಈ ಶಾಲೆಗೆ ಆರೆಸ್ಸೆಸ್ಸಿನ ಮಾಜಿ ಸರಸಂಘ ಚಾಲಕ ರಾಜೇಂದ್ರ ಸಿಂಗ್ ಆಲಿಯಾಸ್ ರಜ್ಜು ಭಯ್ಯ ಅವರ ಹೆಸರಿಡಲಾಗುವುದು.
ಈ ಶಾಲೆ ರಜ್ಜು ಭಯ್ಯ ಅವರ ಹುಟ್ಟೂರಾದ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಶಿಕಾರಿಪುರ್ ಎಂಬಲ್ಲಿ ಸ್ಥಾಪಿಸಲಾಗುವುದು.
ಬಾಲಕರಿಗಾಗಿನ ಈ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ ಈಗ ಪ್ರಗತಿಯಲ್ಲಿದ್ದು, ಸಿಬಿಎಸ್ಸಿ ಪಠ್ಯಕ್ರಮವನ್ನು ಇಲ್ಲಿ ಅನುಸರಿಸಲಾಗುವುದು. ಮುಂದಿನ ವರ್ಷದ ಎಪ್ರಿಲ್ ತಿಂಗಳಿನಿಂದ ಕಾರ್ಯಾಚರಿಸಲಿರುವ ಈ ಸಂಸ್ಥೆಯಲ್ಲಿ ಆರನೇ ತರಗತಿಯಿಂದ 12ನೇ ತರಗತಿ ತನಕ ಶಿಕ್ಷಣ ಒದಗಿಸಲಾಗುವುದು.
“ಈ ಸಂಸ್ಥೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಆರಂಭಿಸಲಾಗುವುದು. ಮುಂದೆ ಇದೇ ಮಾದರಿಯಲ್ಲಿ ಬೇರೆಡೆಯೂ ಆರಂಭಿಸುವ ಸಾಧ್ಯತೆಯಿದೆ'' ಎಂದು ವಿದ್ಯಾ ಭಾರತಿ ಉಚ್ಛ ಶಿಕ್ಷಾ ಸಂಸ್ಥಾನ್ ಇದರ ಪಶ್ಚಿಮ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ವಿಭಾಗದ ಪ್ರಾದೇಶಿಕ ಸಂಚಾಲಕ ಅಜಯ್ ಗೋಯಲ್ ಹೇಳಿದ್ದಾರೆ.
ಸೈನಿಕ್ ವಿದ್ಯಾ ಮಂದಿರದ ಪ್ರಾಸ್ಪೆಕ್ಟಸ್ ಸಿದ್ಧವಿದ್ದು, ಮುಂದಿನ ತಿಂಗಳು ಅರ್ಜಿಗಳನ್ನು ಆಹ್ವಾನಿಸಲಾಗುವುದು, ಆರಂಭಿಕ ಬ್ಯಾಚಿಗೆ 160 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ವಿದ್ಯಾ ಭಾರತಿ ಸದ್ಯ ದೇಶದ ವಿವಿಧೆಡೆ 20,000ಕ್ಕೂ ಅಧಿಕ ಶಾಲೆಗಳನ್ನು ನಡೆಸುತ್ತಿದೆ.