ನಿವೃತ್ತ ಐಪಿಎಸ್ ಅಧಿಕಾರಿ, ಪುತ್ರನ ಮೇಲೆ ಗುಂಪುಹಲ್ಲೆ
ಪಾಟ್ನಾ, ಆ.14: ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಅವರ ಪುತ್ರನ ಮೇಲೆ 50 ಮಂದಿಯಿದ್ದ ಗುಂಪೊಂದು ಹಲ್ಲೆ ನಡೆಸಿದ ಘಟನೆ ಮಂಗಳವಾರ ಬಿಹಾರದ ಪಾಟ್ನಾದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಐಪಿಎಸ್ ಅಧಿಕಾರಿಯ ಪತ್ನಿಯ ಹೇಳಿಕೆಯ ಪ್ರಕಾರ, ಅವರ ಕಾರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸಂದರ್ಭ ಯುವಕನೊಬ್ಬ ತನ್ನ ಬೈಕನ್ನು ಕಾರಿಗೆ ಗುದ್ದಿದ್ದ. ಈ ಬಗ್ಗೆ ವಿಚಾರಿಸಲು ಆಕೆಯ ಪತಿ ಮತ್ತು ಮಗ ಕಾರಿನಿಂದ ಹೊರಗಿಳಿದಾಗ ಬೈಕ್ನಲ್ಲಿದ್ದ ಯುವಕ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಚಾಡಲು ಆರಂಭಿಸಿದ. ನಂತರ ಆತ 40-50 ಮಂದಿಗೆ ಕರೆ ಮಾಡಿ ಬರುವಂತೆ ಸೂಚಿಸಿದ. ಎಲ್ಲರೂ ನಾವಿದ್ದಲ್ಲಿಗೆ ಬಂದು ನಮ್ಮನ್ನು ನಿಂದಿಸಿದರು ಮತ್ತು ನನ್ನ ಪತಿ ಮತ್ತು ಪುತ್ರನ ಮೇಲೆ ಹಲ್ಲೆ ನಡೆಸಿದರು ಎಂದು ಆಕೆ ತಿಳಿಸಿದ್ದಾರೆ.
ಈ ಕುರಿತು ಪೊಲೀಸರಲ್ಲಿ ದೂರು ನೀಡಲು ಹೋದರೆ ಅವರೂ ಉದಾಸೀನ ತೋರಿದ್ದಾರೆ ಮತ್ತು ಘಟನೆ ನಡೆದ ಪ್ರದೇಶ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಮಾಜಿ ಐಪಿಎಸ್ ಅಧಿಕಾರಿ ದೂರಿದ್ದಾರೆ.
Next Story