120 ಸಲ ಬಳಸಬಹುದಾದ ಸ್ಯಾನಿಟರಿ ನ್ಯಾಪ್ಕಿನ್ ಬಿಡುಗಡೆ
ಇದನ್ನು ತಯಾರಿಸಿದ್ದು ಹೇಗೆ ಗೊತ್ತಾ?
ಹೊಸದಿಲ್ಲಿ,ಆ.20: ಐಐಟಿ-ದಿಲ್ಲಿಯ ಉತ್ತೇಜನದೊಂದಿಗೆ ಆರಂಭಗೊಂಡಿರುವ ನವೋದ್ಯಮ ‘ಸ್ಯಾನ್ಫೆ ’ ಸಂಯೋಜಿತ ಬಾಳೆ ನಾರಿನಿಂದ ತಯಾರಿಸಲ್ಪಟ್ಟ,ಮರುಬಳಸಬಹುದಾದ ಸ್ಯಾನಿಟರಿ ನ್ಯಾಪ್ಕಿನ್ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದು ದೇಶದಲ್ಲಿ ಇಂತಹ ಮೊದಲ ನ್ಯಾಪ್ಕಿನ್ ಆಗಿದ್ದು, ಎರಡು ವರ್ಷಗಳ ಬಾಳಿಕೆಯನ್ನು ಹೊಂದಿದೆ ಮತ್ತು ಸುಮಾರು 120 ಸಲ ಮರುಬಳಸಬಹುದಾಗಿದೆ.
ಐಐಟಿ-ದಿಲ್ಲಿಯ ಪ್ರೊಫೆಸರ್ಗಳ ನೆರವಿನೊಂದಿಗೆ ಅಭಿವೃದ್ಧಿಗೊಳಿಸಲಾದ ಈ ನ್ಯಾಪ್ಕಿನ್ಗಳಿಗೆ ಎರಡಕ್ಕೆ 199 ರೂ.ಬೆಲೆಯನ್ನು ನಿಗದಿಗೊಳಿಸಲಾಗಿದೆ. ಕಂಪನಿಯು ಉತ್ಪನ್ನದ ಪೇಟೆಂಟ್ಗೂ ಅರ್ಜಿಯನ್ನು ಸಲ್ಲಿಸಿದೆ.
ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸ್ಯಾನಿಟರಿ ನ್ಯಾಪ್ಕಿನ್ಗಳು ಸಿಂಥೆಟಿಕ್ ವಸ್ತುಗಳು ಮತ್ತು ಪ್ಲಾಸ್ಟಿಕ್ನಿಂದ ತಯಾರಾಗಿದ್ದು,ಮಣ್ಣಿನಲ್ಲಿ ಕೊಳೆಯಲು 50-60 ವರ್ಷಗಳಿಗೂ ಹೆಚ್ಚಿನ ಸಮಯ ಬೇಕಾಗುತ್ತದೆ.
ಭಾರೀ ಪ್ರಮಾಣದಲ್ಲಿ ಮುಟ್ಟಿನ ಸ್ರಾವದ ತ್ಯಾಜ್ಯವನ್ನು ಸಾಮಾನ್ಯವಾಗಿ ಖಾಲಿ ಜಾಗಗಳಲ್ಲಿ,ಕೆರೆ-ನದಿಗಳಲ್ಲಿ ಎಸೆಯಲಾಗುತ್ತದೆ, ಸುಡಲಾಗುತ್ತದೆ,ಮಣ್ಣಿನಲ್ಲಿ ಹೂಳಲಾಗುತ್ತದೆ ಅಥವಾ ಟಾಯ್ಲೆಟ್ಗಳ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಇಂತಹ ಪರಿಪಾಠವು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇವುಗಳನ್ನು ಸುಡುವುದರಿಂದ ಡೈಆಕ್ಸಿನ್ಗಳ ರೂಪದಲ್ಲಿ ಕ್ಯಾನ್ಸರ್ಜನಕ ಹೊಗೆಯುಂಟಾಗುತ್ತದೆ ಮತ್ತು ಅದು ವಾಯು ಮಾಲಿನ್ಯದ ಅಪಾಯವನ್ನುಂಟು ಮಾಡುತ್ತದೆ ಎಂದು ಸ್ಯಾನ್ಫೆಯ ಸ್ಥಾಪಕರಲ್ಲೊಬ್ಬರಾದ ಅರ್ಚಿತ್ ಅಗರವಾಲ್ ಹೇಳಿದರು.
ಅಗರವಾಲ್ ಅವರು ಐಐಟಿ-ದಿಲ್ಲಿಯಲ್ಲಿ ಬಿ ಟೆಕ್ ವ್ಯಾಸಂಗ ಮಾಡುತ್ತಿದ್ದಾಗ ಸಹಪಾಠಿ ಹ್ಯಾರಿ ಸೆಹ್ರಾವತ್ ಜೊತೆಗೂಡಿ ಸ್ಯಾನ್ಫೆಯನ್ನು ಸ್ಥಾಪಿಸಿದ್ದರು.