ಪಾಕಿಸ್ತಾನಿಗಳು ಭಾರತೀಯರನ್ನು ಸಂಬಂಧಿಕರಂತೆ ನೋಡುತ್ತಾರೆ ಎಂದ ಶರದ್ ಪವಾರ್
ಮುಂಬೈ,ಸೆ.15: ಪಾಕಿಸ್ತಾನದ ಜನರು ಭಾರತದಲ್ಲಿ ಸಾಮಾನ್ಯವಾಗಿ ತಿಳಿದುಕೊಂಡಿರುವಂತೆ ನಮ್ಮ ಮೇಲೆ ಕೋಪ ಹೊಂದಿಲ್ಲ ಮತ್ತು ಭಾರತೀಯರನ್ನು ಅವರು ಸಂಬಂಧಿಗಳಂತೆ ನೋಡುತ್ತಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.
ಭಾರತದಲ್ಲಿ ಪಾಕಿಸ್ತಾನದ ಬಗೆಗಿನ ಋಣಾತ್ಮಕ ನಿಲುವು ರಾಜಕೀಯ ಲಾಭಕ್ಕಾಗಿ ಹರಡುತ್ತಿರುವ ಸುಳ್ಳು ಪ್ರಚಾರಗಳ ಫಲವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ತಾನು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನರು ಆನಂದದಿಂದ ಸ್ವಾಗತಿಸಿದರು ಎಂದು ಶರರ್ ಪವಾರ್ ತಿಳಿಸಿದ್ದಾರೆ. ಪಾಕಿಸ್ತಾನಿಗಳಿಗೆ ಅನ್ಯಾಯವಾಗಿದೆ ಮತ್ತು ಅವರು ಅಸಂತುಷ್ಟರಾಗಿದ್ದಾರೆ ಎಂದು ಇಲ್ಲಿನವರು ಹೇಳುತ್ತಾರೆ. ಆದರೆ ಅದು ನಿಜವಲ್ಲ. ಇಂತಹ ಹೇಳಿಕೆಯನ್ನು ಪಾಕಿಸ್ತಾನದ ನೈಜ ಪರಿಸ್ಥಿತಿಯನ್ನು ಅರಿಯದೆ ಕೇವಲ ರಾಜಕೀಯ ಲಾಭಕ್ಕಾಗಿ ನೀಡಲಾಗುತ್ತದೆ ಎಂದು ಎನ್ಸಿಪಿ ಮುಖ್ಯಸ್ಥ ತಿಳಿಸಿದ್ದಾರೆ.
ನಾನು ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೇನೆ. ಪ್ರತಿಬಾರಿಯೂ ಅಲ್ಲಿ ನನ್ನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಗಿತ್ತು. ತಾವು ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಭಾರತಕ್ಕೆ ಹೋಗಲು ಸಾಧ್ಯವಾಗದೆ ಇದ್ದರೂ ಅವರು ಪ್ರತಿ ಭಾರತೀಯನನ್ನೂ ಸಂಬಂಧಿಕನಂತೆಯೇ ನೋಡುತ್ತಾರೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.