ಭಾರೀ ಮಳೆ ಎಚ್ಚರಿಕೆ:ಮುಂಬೈ ಶಾಲಾ-ಕಾಲೇಜಿಗೆ ಇಂದು ರಜೆ ಘೋಷಣೆ
ಮುಂಬೈ, ಸೆ.19: ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶದ ಎಲ್ಲ ಶಾಲಾ ಶಾಲೆಗಳು ಹಾಗೂ ಜೂನಿಯರ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸರಕಾರ ತಿಳಿಸಿದೆ.
‘‘ಭಾರೀ ಮಳೆ ಆಗುವ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಮುಂಬೈ, ಥಾಣೆ ಹಾಗೂ ಕೊಂಕಣ ವಿಭಾಗದ ಎಲ್ಲ ಶಾಲೆಗಳು ಹಾಗೂ ಜೂನಿಯರ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸ್ಥಳೀಯ ಪರಿಸ್ಥಿತಿಯನ್ನು ಆಧರಿಸಿ ರಜೆ ಕೊಡುವ ವಿಚಾರದ ಬಗ್ಗೆ ನಿರ್ಧರಿಸಲಾಗಿದೆ’’ ಎಂದು ಶಾಲಾ ಶಿಕ್ಷಣ ಸಚಿವ ಆಶೀಶ್ ಶೇಲಾರ್ ಟ್ವೀಟ್ ಮಾಡಿದ್ದಾರೆ.
ಮುಂಬೈ ಉಪ ನಗರದಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿದಿದೆ. ಮೂರು ಗಂಟೆಗಳಲ್ಲಿ ವರ್ಸೋವಾದಲ್ಲಿ 50 ಮಿಲಿಮೀಟರ್ ಮಳೆಯಾಗಿದೆ. ಮುಂಬೈಯಲ್ಲದೆ, ಪಾಲ್ಘರ್ ಹಾಗೂ ಥಾಣೆ ನಗರಗಳಲ್ಲಿ ಅತಿ ಹಾಗೂ ಅತ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಕೆಎಸ್ ಹೋಸಲಿಕರ್ ಹೇಳಿದ್ದಾರೆ.
Next Story