ಮುಂಬೈ ಕಟ್ಟಡದಲ್ಲಿ ಭಾರೀ ಬೆಂಕಿ ಓರ್ವನ ಸಾವು
ಮುಂಬೈ,ಅ.13: ಮುಂಬೈನ ಗ್ರಾಂಟ್ ರೋಡ್ನಲ್ಲಿಯ ಐದು ಅಂತಸ್ತುಗಳ ವಾಣಿಜ್ಯ ಸಂಕೀರ್ಣವೊಂದರಲ್ಲಿ ರವಿವಾರ ಬೆಳಿಗ್ಗೆ ಭಾರೀ ಬೆಂಕಿ ಅವಘಡದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು,ಐವರು ಅಸ್ವಸ್ಥಗೊಂಡಿದ್ದಾರೆ. ಓರ್ವ ವ್ಯಕ್ತಿಗೆ ಸುಟ್ಟ ಗಾಯಗಳಾಗಿವೆ.
ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ‘ಆದಿತ್ಯ ಆರ್ಕೇಡ್’ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಟ್ಟಡದಲ್ಲಿ ಸಿಕ್ಕಿಕೊಂಡಿದ್ದ ಸುಮಾರು 10 ಜನರನ್ನು ರಕ್ಷಿಸಿದ್ದಾರೆ. ಕಟ್ಟಡದ ವಿದ್ಯುತ್ ವೈರಿಂಗ್ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಉತ್ತಮ ಕುಮಾರ್(22) ಎಂಬಾತ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಸೇರಿದಂತೆ ಐವರು ಉಸಿರುಗಟ್ಟುವಿಕೆಯಿಂದ ಅಸ್ವಸ್ಥರಾಗಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಸಂದರ್ಭ ಅಗ್ನಿಶಾಮಕ ದಳದ ಸಿಬ್ಬಂದಿಯೋರ್ವರ ಕೈಗೆ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
Next Story