ತನ್ನ ಸಿಬ್ಬಂದಿ ಸಂಖ್ಯೆಯನ್ನು ಶೇ 25ರಷ್ಟು ಇಳಿಸಲಿರುವ ರೈಲ್ವೆ ಮಂಡಳಿ
ಹೊಸದಿಲ್ಲಿ: ಭಾರತೀಯ ರೈಲ್ವೆ ಮಂಡಳಿ ತನ್ನ ಸಿಬ್ಬಂದಿ ಸಂಖ್ಯೆಯನ್ನು ಈಗಿನ 200ರಿಂದ 150ಕ್ಕೆ ಇಳಿಸಲು ನಿರ್ಧರಿಸಿದೆ. ಐದು ಮಂದಿ ನಿರ್ದೇಶಕ ಮಟ್ಟದ ಅಧಿಕಾರಿಗಳನ್ನು ರೈಲ್ವೆ ವಲಯಗಳಿಗೆ ವರ್ಗಾವಣೆಗೊಳಿಸಲು ಮಂಡಳಿ ನಿರ್ಧರಿಸಿದೆ. ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಇಂತಹ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ವರ್ಗಾವಣೆ ಪ್ರಕ್ರಿಯೆಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿರುವ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಂಡಳಿಯ ಅತ್ಯುನ್ನತ ಹಂತದ ಅಧಿಕಾರಿಗಳಿಗೆ ಈ ವರ್ಗಾವಣೆಯ ಬಿಸಿ ತಟ್ಟುವುದಿಲ್ಲ ಎಂದಿದ್ದಾರೆ.
"ರೈಲ್ವೆ ಸಚಿವ ಪಿಯುಷ್ ಗೋಯೆಲ್ ಅವರು ನೀಡಿದಂತಹ ಪ್ರಮುಖ ಸಲಹೆ ಇದಾಗಿತ್ತು ಹಾಗೂ ಅದನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವುದು ಅಗತ್ಯವಾಗಿತ್ತು. ರೈಲ್ವೆ ಮಂಡಳಿಯಲ್ಲಿ ಒಂದೇ ವಿಚಾರದ ಕುರಿತಂತೆ ಗಮನ ನೀಡುತ್ತಿದ್ದ ಹಲವು ಅಧಿಕಾರಿಗಳಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ಅಧಿಕಾರಿಗಳನ್ನು ವಲಯ ಮಟ್ಟಕ್ಕೆ ವರ್ಗಾವಣೆಗೊಳಿಸಲಾಗುವುದು, ಎಷ್ಟು ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗುವುದೆಂಬ ಕುರಿತಂತೆ ಅಂತಿಮ ನಿರ್ಧಾರ ಇನ್ನಷ್ಟೇ ಕೈಗೊಳ್ಳಬೇಕಿದೆ,'' ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಮಂಡಳಿಯ ಪುರ್ನವಿಂಗಡಣೆಗೆ ಬಿಬೇಕ್ ದೇಬರಾಯ್ ನೇತೃತ್ವದ ಸಮಿತಿಯೊಂದು 2015ರಲ್ಲಿಯೇ ಶಿಫಾರಸು ಮಾಡಿತ್ತು.