ಪತ್ನಿಯ ಕೊಲೆ ಆರೋಪಿಯನ್ನು ಥಳಿಸಿ ಕೊಂದ ಗ್ರಾಮಸ್ಥರು
ಹೊಸದಿಲ್ಲಿ, ನ.2: ಪತ್ನಿಯನ್ನು ಕೊಂದಿದ್ದ ಆರೋಪಿಯನ್ನು ಗ್ರಾಮಸ್ಥರು ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಸಿವೌರ್ ಗ್ರಾಮದಲ್ಲಿ ನಡೆದಿದೆ.
ನಾಸಿರ್ ಕುರೇಷಿ (40) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಪತ್ನಿ ಅಫ್ಸಾರಿ (35) ಜೊತೆ ಸಿವೌರ್ ಗ್ರಾಮದಲ್ಲಿನ ಆಕೆಯ ತವರುಮನೆಯಲ್ಲಿ ವಾಸವಿದ್ದ. ಬುಧವಾರ ಯಾವುದೋ ಕಾರಣಕ್ಕೆ ಅಫ್ಸಾರಿಯೊಂದಿಗೆ ಜಗಳವಾಡಿದ್ದ ನಾಸಿರ್ ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು,ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದ ತಾಯಿ ಮತ್ತು ಸಹೋದರಿ ಗಾಯಗೊಂಡಿದ್ದು, ಅವರ ಬೊಬ್ಬೆ ಕೇಳಿ ಧಾವಿಸಿ ಬಂದಿದ್ದ ಗ್ರಾಮಸ್ಥರು ಪರಾರಿಯಾಗಲು ಯತ್ನಿಸುತ್ತಿದ್ದ ನಾಸಿರ್ನನ್ನು ಥಳಿಸಿ ಕೊಂದಿದ್ದಾರೆ. ನಾಸಿರ್ನನ್ನು ಗುಂಪು ಥಳಿಸುತ್ತಿದ್ದ ವೀಡಿಯೊ ಬಹಿರಂಗಗೊಳ್ಳುವವರೆಗೂ ಇಂತಹ ಘಟನೆ ನಡೆದಿರುವುದನ್ನು ಸ್ಥಳೀಯ ಪೊಲೀಸರು ನಿರಾಕರಿಸಿದ್ದರು.
ನಾಸಿರ್ ಎನ್ನಲಾಗಿರುವ ವ್ಯಕ್ತಿಯನ್ನು ಕನಿಷ್ಠ ಆರು ಜನರು ನೆರೆದಿದ್ದ ಭಾರೀ ಸಂಖ್ಯೆಯ ಗುಂಪಿನೆದುರೇ ಸರದಿಯ ಪ್ರಕಾರ ದೊಣ್ಣೆ ಮತ್ತು ಸರಳುಗಳಿಂದ ಕ್ರೂರವಾಗಿ ಥಳಿಸುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.
ವೀಡಿಯೊದಲ್ಲಿ ನಾಸಿರ್ನನ್ನು ಥಳಿಸುತ್ತಿದ್ದ ಆರು ಜನರ ಪೈಕಿ ಐವರನ್ನು ತಾವು ಗುರುತಿಸಿದ್ದು,ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.