ವಲಸೆ ಹಗರಣ: ಅಮೆರಿಕದಲ್ಲಿ ಆರು ಭಾರತೀಯರಿಗೆ ಶಿಕ್ಷೆ
ಹೈದರಾಬಾದ್: ಅಮೆರಿಕದ ಫಾರ್ಮಿಂಗ್ಟನ್ ವಿವಿಯಲ್ಲಿ ಕಳೆದ ಜನವರಿಯಲ್ಲಿ ಪತ್ತೆಯಾದ ವಲಸೆ ಹಗರಣದ ಸಂಬಂಧ ಬಂಧಿತರಾಗಿದ್ದ ಎಂಟು ಮಂದಿಯ ಪೈಕಿ ಆರು ಮಂದಿಗೆ ಜೈಲುಶಿಕ್ಷೆ ವಿಧಿಸಲಾಗಿದೆ. ಉಳಿದ ಇಬ್ಬರಿಗೂ ಶೀಘ್ರದಲ್ಲೇ ಶಿಕ್ಷೆ ಘೋಷಿಸಲಾಗುವುದು ಎಂದು ಅಮೆರಿಕದ ಇಮಿಗ್ರೇಶನ್ ಆ್ಯಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ಐಸಿಇ) ಪ್ರಕಟಿಸಿದೆ.
ಎಲ್ಲ ಎಂಟು ಮಂದಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದವರು.
ವಲಸೆ ಹಗರಣವನ್ನು ಪತ್ತೆ ಮಾಡುವ ರಹಸ್ಯ ಕಾರ್ಯಾಚರಣೆ ಅಂಗವಾಗಿ ಐಸಿಇ 2015ರಲ್ಲಿ ಮಿಚಿಗನ್ನಲ್ಲಿ ಫಾರ್ಮಿಂಗ್ಟನ್ ವಿವಿ ಆರಂಭಿಸಿತ್ತು. ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುವ ಸಲುವಾಗಿ ಉದ್ಯೋಗದಾತರ ಮೂಲಕ ಅಂತರ್ ರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲಿ ನೋಂದಾಯಿಸಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂತೋಷ್ ಸಾಮ, ಭರತ್ ಕಾಕಿರೆಡ್ಡಿ, ಸುರೇಶ್ ಕಂಡಾಲ, ಅವಿನಾಶ್ ಟಕ್ಕಲಪಲ್ಲಿ, ಅಶ್ವನ್ ತೂನೆ ಮತ್ತು ನವೀನ್ ಪ್ರತಿಪತಿ ಎಂಬವರಿಗೆ 12 ರಿಂದ 24 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉಳಿದ ಇಬ್ಬರು ಕೂಡಾ ತಪ್ಪಿತಸ್ಥರು ಎಂದು ಈಶಾನ್ಯ ಪ್ರದೇಶದ ಸಂವಹನ ನಿರ್ದೇಶಕ ಪ್ರಕಟಿಸಿದ್ದಾರೆ.
ಏಳನೇ ಆರೋಪಿ ಪ್ರೇಮ್ ರಾಮಪೀಸಾ ಮತ್ತು ಎಂಟನೇ ಆರೋಪಿ ಫಣಿದೀಪ್ ಕರ್ನಾಟಿ ಅವರಿಗೆ ಕ್ರಮವಾಗಿ ನವೆಂಬರ್ 19 ಹಾಗೂ 2020ರ ಜನವರಿಯಲ್ಲಿ ಶಿಕ್ಷೆ ಘೋಷಿಸಲಾಗುತ್ತಿದೆ. ಜೈಲು ಶಿಕ್ಷೆಯ ಅವಧಿ ಮುಗಿಸಿದ ಬಳಿಕ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಹಗರಣ ಬೆಳಕಿಗೆ ಬಂದು 145 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.