ರಾಜೀವ್ ಗಾಂಧಿ ಹತ್ಯೆ ಆರೋಪಿಗೆ ಪರೋಲ್
ಚೆನ್ನೈ, ನ. 21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 7 ಮಂದಿ ದೋಷಿಗಳಲ್ಲಿ ಓರ್ವನಾದ ರಾಬರ್ಟ್ ಪಾಯಸ್ಗೆ ಮದ್ರಾಸ್ ಉಚ್ಚ ನ್ಯಾಯಾಲಯ ಗುರುವಾರ 30 ದಿನಗಳ ಪರೋಲ್ ನೀಡಿದೆ.
ತನ್ನ ಪುತ್ರನ ವಿವಾಹಕ್ಕೆ ಸಿದ್ಧತೆ ನಡೆಸಲು ಪರೋಲ್ ನೀಡುವಂತೆ ಕೋರಿ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಆರ್.ಎಂ.ಟಿ. ಟೀಕಾ ರಾಮನ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಪರೋಲ್ ನೀಡಿದೆ.
ನವೆಂಬರ್ 25ರಿಂದ ಡಿಸೆಂಬರ್ 24ರ ವರೆಗೆ ಪರೋಲ್ ನೀಡಲಾಗಿದೆ.
ಮಾಧ್ಯಮ, ರಾಜಕೀಯ ಪಕ್ಷ ಅಥವಾ ಯಾವುದೇ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಾರದು. ಉತ್ತಮ ರೀತಿಯಲ್ಲಿ ವರ್ತಿಸಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು ಮೊದಲಾದ ಶರತ್ತುಗಳನ್ನು ಪರೋಲ್ ಒಳಗೊಂಡಿದೆ.
Next Story