ಕೇರಳದ ನರ್ಸ್ ಲಿನಿಗೆ ಮರಣೋತ್ತರ ‘ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ’
ನಿಪಾಹ್ ವೈರಸ್ ಗೆ ಬಲಿಯಾದ ಲಿನಿ
ಹೊಸದಿಲ್ಲಿ, ಡಿ.5: ಕಳೆದ ವರ್ಷ ನಿಪಾಹ್ ಬಾಧಿತ ರೋಗಿಯೊಬ್ಬರ ಆರೈಕೆ ಸಂದರ್ಭ ಅಕಸ್ಮಾತ್ ಸೋಂಕು ತಗುಲಿ ಮೃತಪಟ್ಟ ಕೇರಳದ 30 ವರ್ಷದ ನರ್ಸ್ ಲಿನಿ ಪಿಎನ್ಗೆ ಗುರುವಾರ ‘ಫ್ಲೋರೆನ್ಸ್ ನೈಟಿಂಗೇಲ್ ಪುರಸ್ಕಾರ’ವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಗಿದೆ.
ಶ್ರೇಷ್ಠ ಸೇವೆ ಸಲ್ಲಿಸಿದ ನರ್ಸ್ಗಳ ಕಾರ್ಯವನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ 1973ರಲ್ಲಿ ಭಾರತ ಸರಕಾರ ‘ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದು ದಿಲ್ಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಲಿಲಿಯ ಪತಿ ಸಜೀಶ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕಾರ ಪ್ರದಾನ ಮಾಡಿದರು. ಜೊತೆಗೆ, ಇತರ 35 ನರ್ಸ್ಗಳಿಗೂ ಪುರಸ್ಕಾರ ಪ್ರದಾನ ಮಾಡಲಾಗಿದೆ.
ಗುಣಮಟ್ಟದ ಆರೋಗ್ಯ ಸೇವೆ ಜನರಿಗೆ ತಲುಪುವ ನಿಟ್ಟಿನಲ್ಲಿ ನರ್ಸ್ಗಳು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನಾರ್ಹವಾಗಿದೆ. ಆರೋಗ್ಯ ಸೇವೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್ಗಳು ಹಾಗೂ ಇಂದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಎಲ್ಲಾ ನರ್ಸ್ಗಳೂ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ರಾಷ್ಟ್ರಪತಿ ಕೋವಿಂದ್ ಶ್ಲಾಘಿಸಿದ್ದಾರೆ.
2018ರಲ್ಲಿ ನಿಫಾ ಕಾಯಿಲೆ ಉಲ್ಬಣಗೊಂಡಿದ್ದ ಸಂದರ್ಭ ಕೇರಳದ ಪೆರಂಬ್ರದಲ್ಲಿನ ಇಎಂಎಸ್ ಸ್ಮಾರಕ ಸಹಕಾರಿ ಆಸ್ಪತ್ರೆಯಲ್ಲಿ ನಿಪಾಹ್ ವೈರಸ್ ಸೋಂಕು ಹೊಂದಿದ್ದ ರೋಗಿಯೊಬ್ಬರ ಆರೈಕೆ ಸಂದರ್ಭ ನರ್ಸ್ ಲಿನಿಗೆ ಸೋಂಕು ತಗುಲಿತ್ತು. ಬಳಿಕ ಅವರನ್ನು ಕೋಝಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೇ 21ರಂದು ಮೃತಪಟ್ಟಿದ್ದರು. ನರ್ಸ್ ಲಿನಿಯ ಸ್ಮರಣಾರ್ಥ ಕೇರಳ ಸರಕಾರ ಅವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದೆ.