ಪೌರತ್ವ ಮಸೂದೆ: ಮುಸ್ಲಿಮರಿಗೆ ಆತಂಕ ಬೇಡ; ಗೃಹ ಸಚಿವ ಅಮಿತ್ ಶಾ
ಹೊಸದಿಲ್ಲಿ,ಡಿ.11: ವಿವಾದಾತ್ಮಕ ಪೌರತ್ವ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಗೃಹ ಸಚಿವ ಅಮಿತ್ಶಾ ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ. ವಿಧೇಯಕದ ಬಗ್ಗೆ ಭಾರತೀಯ ಮುಸ್ಲಿಮರು ಭಯಪಡುವ ಅಗತ್ಯವೇ ಇಲ್ಲ ಹಾಗೂ ಅವರು ಭಾರತದ ಪೌರರಾಗಿಯೇ ಉಳಿದುಕೊಳ್ಳಲಿದ್ದಾರೆಂದು ಅವರು ಹೇಳಿದ್ದಾರೆ.
ವಿಧೇಯಕವನ್ನು ಸದನದಲ್ಲಿ ಮಂಡಿಸಿ ಮಾತನಾಡಿದ ಅವರು ‘‘ಮುಸ್ಲಿಂ ಸಮುದಾಯದ ಸದಸ್ಯರಿಗೆ ಯಾರೂ ಕಿರುಕುಳ ನೀಡಲಾರರು ಎಂದರು. ಪ್ರಸ್ತಾವಿತ ಮಸೂದೆಯು ನೆರೆಹೊರೆಯ ರಾಷ್ಟ್ರಗಳಲ್ಲಿ ದಮನಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಬದುಕುವ ಹಕ್ಕನ್ನು ನೀಡಲಿದೆಯೆಂದು ಅವರು ಹೇಳಿದರು.
‘‘ಮುಸ್ಲಿಮರು ಯಾವ ವಿಷಯದಲ್ಲೂ ಭಯಪಡಬೇಕಾಗಿಲ್ಲ. ಈ ವಿಧೇಯಕವು ನಿರ್ದಿಷ್ಟವಾಗಿ ಮುಸ್ಲಿಮ್ ಸಮುದಾಯಕ್ಕೆ ವಿರುದ್ಧವಾಗಿದೆಯೆಂಬ ತಪ್ಪುಮಾಹಿತಿ ಹಾಗೂ ಗೊಂದಲವನ್ನು ಹರಡಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಥವಾ ಚರ್ಚೆ ನಡೆಸಬೇಕಾದ ಪ್ರಶ್ನೆಯೇ ಇರುವುದಿಲ್ಲ. ಮುಸ್ಲಿಮರು ಭಾರತದ ಪೌರರು, ಅವರು ಭಾರತದ ಪೌರರಾಗಿಯೇ ಉಳಿಯಲಿದ್ದಾರೆ ಹಾಗೂ ಅವರಿಗೆ ಯಾರೂ ಕಿರುಕುಳ ನೀಡಲಾರರು’’ ಎಂದು ಶಾ ಹೇಳಿದರು.
ಆದಾಗ್ಯೂ ಇತರ ದೇಶಗಳಿಂದ ಬಂದು ಅಕ್ರಮವಾಗಿ ನೆಲೆಸಿದ ಮುಸ್ಲಿಮ್ ವಲಸಿಗರಿಗೆ ಪೌರತ್ವವನ್ನು ನೀಡಲಾರದು ಎಂದವರು ಹೇಳಿದರು.
‘‘ಪಾಕಿಸ್ತಾನದಿಂದ ಬಂದ ಮುಸ್ಲಿಮರಿಗೆ ಪೌರತ್ವ ನೀಡಲು ನೀವು ಬಯಸುತ್ತೀರಾ? ಬಾಂಗ್ಲಾದಿಂದ ಬಂದ ಮುಸ್ಲಿಮರನ್ನು ಪೌರರನ್ನಾಗಿ ಮಾಡಬೇಕೇನು?. ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮರಿಗೆ ಪೌರತ್ವ ನೀಡಬೇಕೇನು?. ಜಗತ್ತಿನಾದ್ಯಂತ ಬರುವ ಮುಸ್ಲಿಮರಿಗೂ ನಾವು ಪೌರತ್ವ ಕೊಡಬೇಕೇನು?. ಈ ರೀತಿಯಾಗಿ ನಾವು ದೇಶವನ್ನು ಹೇಗೆ ನಡೆಸಲು ಸಾಧ್ಯ?’’ ಎಂದು ಅವರು ಪ್ರಶ್ನಿಸಿದರು.
ಪ್ರಸ್ತಾವಿತ ಪೌರತ್ವ ತಿದ್ದುಪಡಿ ಮಸೂದೆಯು ಐತಿಹಾಸಿಕವೆಂದು ಬಣ್ಣಿಸಿದ ಶಾ ಅವರು, ನೆರೆಹೊರೆಯ ದೇಶಗಳಲ್ಲಿ ಶೋಷಣೆಗೊಳಗಾದ ಕೋಟ್ಯಂತರ ಮಂದಿಯ ಬಾಳಲ್ಲಿ ಇದರಿಂದ ಹೊಸ ಆಶಾಕಿರಣ ಮೂಡಲಿದೆ.ಅವರಿಗೆ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸಬಹುದು ಹಾಗೂ ತಮ್ಮ ಮಹಿಳೆಯರ ಘನತೆಯನ್ನು ಕಾಪಾಡಬಹುದಾಗಿದೆ ಎಂದು ಶಾ ಹೇಳಿದರು.
ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಸರಿಸಮಾನವಾಗಿ ಕಾಣುತ್ತಿಲ್ಲ ಹಾಗೂ ಅವರ ಜನಸಂಖ್ಯೆಯು ಶೇ.20ಕ್ಕೆ ಕುಸಿದೆ. ಅವರನ್ನು ಹತ್ಯೆಗೈಯಲಾಗುತ್ತಿದೆ ಅಥವಾ ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ ಇಲ್ಲವೇ ಭಾರತಕ್ಕೆ ವಲಸೆಹೋಗುವಂತೆ ಮಾಡಲಾಗುತ್ತಿದೆ ಎಂದು ಶಾ ಸದನದಲ್ಲಿ ಹೇಳಿದರು.
2019ರ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯು ಇಂತಹ ಪ್ರಸ್ತಾವಿತ ಶಾಸನವನ್ನು ಜಾರಿಗೊಳಿಸುವ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಹಾಗೂ ಅದಕ್ಕಾಗಿ ದೇಶದ ಜನತೆ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ ಎಂದರು.