ಆರ್ಬಿಐನಿಂದ ಬ್ಯಾಂಕಿಂಗ್ನ ಕೋಮುವಾದೀಕರಣ: ಫ್ಯಾನ್ ಇಂಡಿಯಾ ಆರೋಪ
ಹೊಸದಿಲ್ಲಿ,ಡಿ.28: ಸಾಮಾನ್ಯ ಅನಿವಾಸಿ (ಎನ್ಆರ್ಓ) ಖಾತೆಗಳನ್ನು ಹೊಂದಿರುವ ಗ್ರಾಹಕರು ತಮ್ಮ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ವಿವರಗಳಲ್ಲಿ ತಮ್ಮ ಧರ್ಮವನ್ನು ನಮೂದಿಸುವಂತೆ ಮಾಡಲು ವಿದೇಶಿ ವಿನಿಮಯ ನಿರ್ವಹಣಾ ನಿಯಮಗಳ (ಫೆಮಾ ಕಾಯ್ದೆ) ಗೆ ಭಾರತೀಯ ರಿಸರ್ವ್ ಬ್ಯಾಂಕ್ ತಿದ್ದುಪಡಿ ಮಾಡಿರುವುದನ್ನು ಫೈನಾನ್ಶಿಯಲ್ ಅಕೌಂಟೆಬಿಲಿಟಿ ನೆಟ್ವರ್ಕ್ ಆಫ್ ಇಂಡಿಯಾ (ಫ್ಯಾನ್ ಇಂಡಿಯಾ) ಖಂಡಿಸಿದೆ.
ಎನ್ಆರ್ಓ ಖಾತೆಗಳ ಗ್ರಾಹಕರ ಕೆವೈಸಿಯಲ್ಲಿ ಧರ್ಮವನ್ನು ನಮೂದಿಸುವ ನಿಯಮವನ್ನು ಜಾರಿಗೊಳಿಸಿರುವುದು ಜಾತ್ಯತೀತ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ವ್ಯವಸ್ಥಿತವಾದ ಹಾಗೂ ಯೋಜಿತ ಪ್ರಯತ್ನವಾಗಿದೆ’ ಎಂದು ದೇಶದ ಆರ್ಥಿಕ ಸಂಸ್ಥೆಗಳ ಉತ್ತರದಾಯಿತ್ವ ಹಾಗೂ ಪಾರದರ್ಶಕತೆಯ ಕುರಿತು ಧ್ವನಿಯೆತ್ತುವ ಸಂಘಟನೆಯಾದ ಫ್ಯಾನ್ ಇಂಡಿಯಾ ಹೇಳಿದೆ.
ನಗದು ಅಮಾನ್ಯತೆ ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸರಕಾರದ ಜೊತೆ ಕೈಜೋಡಿಸಿ ಹಲವಾರು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.
ಕೆವೈಸಿ ವಿವರಗಳಲ್ಲಿ ಧರ್ಮವನ್ನು ನಮೂದಿಸುವುದು ಸಂವಿಧಾನ ವಿರೋಧಿ ನಡೆಯೆಂದು ಫ್ಯಾನ್ ಇಂಡಿಯಾ ಹೇಳಿಕೆಯಲ್ಲಿ ಖಂಡಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವಾಗಲೇ ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸರಕಾದ ಕೋಮುವಾದಿ ಅಜೆಂಡಾವನ್ನು ಅನುಸರಿಸುತ್ತಿದೆಯೆಂದೆಯೆಂದು ಅದು ಹೇಳಿದೆ.
ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವುದಕ್ಕೆ ಧರ್ಮವು ನಿಶಾನೆಯಾಗಲು ಸಾಧ್ಯವಿಲ್ಲವೆಂದು ಫ್ಯಾನ್ ಇಂಡಿಯಾ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದು, ಭವಿಷ್ಯದಲ್ಲಿ ಈ ನೀತಿಯನ್ನು ಆರ್ಬಿಐ ಇತರ ಬ್ಯಾಂಕ್ ಖಾತೆಗಳಿಗೂ ವಿಸ್ತರಿಸುವ ಸಾಧ್ಯತೆಯಿದೆಯೆಂದು ಆತಂಕ ವ್ಯಕ್ತಪಡಿಸಿದೆ.