ಹಿರಿಯಾಧಿಕಾರಿಗಳಿಂದ ಲೈಂಗಿಕ ಕಿರುಕುಳ ಆರೋಪ: ಉತ್ತರ ಪ್ರದೇಶದ ಮಹಿಳಾ ಪೇದೆಯ ವೀಡಿಯೋ ವೈರಲ್
"ಪೊಲೀಸ್ ಇಲಾಖೆಯಲ್ಲಿ ನನಗೆ ಸುರಕ್ಷತೆಯಿಲ್ಲದಿರುವಾಗ ಇತರರಿಗೆ ಹೇಗೆ ಸುರಕ್ಷತೆ ಒದಗಿಸಲಿ?"
ಸಾಂದರ್ಭಿಕ ಚಿತ್ರ
ಲಕ್ನೋ: ತನ್ನ ಹಿರಿಯಾಧಿಕಾರಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಲಕ್ನೋದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಾರೆ.
"ನನ್ನದೇ ಪೊಲೀಸ್ ಇಲಾಖೆಯಲ್ಲಿ ನಾನು ಸುರಕ್ಷಿತಳಾಗಿಲ್ಲದೇ ಇರುವಾಗ ಇತರ ಸಂತ್ರಸ್ತರಿಗೆ ಹೇಗೆ ಸಮಾಧಾನ ಹೇಳಲಿ? ಒಬ್ಬ ಸಂತ್ರಸ್ತೆಯಾಗಿ ನನಗೇ ನ್ಯಾಯ ದೊರೆಯದೇ ಇರುವಾಗ ಇತರ ಸಂತ್ರಸ್ತರಿಗೆ ಹೇಗೆ ನ್ಯಾಯ ದೊರಕಿಸಿ ಕೊಡುವ ಬಗ್ಗೆ ಯೋಚಿಸಲಿ ?'' ಎಂದು ಸಮವಸ್ತ್ರದಲ್ಲಿರುವ ಆಕೆ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.
ಲಕ್ನೋದ ಹಿರಿಯ ಪೊಲಿಸ್ ವರಿಷ್ಠಾಧಿಕಾರಿಯ ಪಿಆರ್ ಒ ತನಗೆ ಅವರನ್ನು ಭೇಟಿಯಾಗಿ ದೂರು ದಾಖಲಿಸಲು ಅನುಮತಿಸಿಲ್ಲ ಎಂದು ಆಕೆ ಆರೋಪಿಸಿದ್ದಾರಲ್ಲದೆ ಆರೋಪಿ ಅಧಿಕಾರಿಯನ್ನು ಪಿಆರ್ಒ ಬೆಂಬಲಿಸುತ್ತಿದ್ದಾರೆಂದು ದೂರಿದ್ದಾರೆ.
ಗುರುವಾರ ಸಂಜೆ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಎಸ್ಪಿ ಶ್ರೇಣಿಯ ಅಧಿಕಾರಿ ರುಚಿತಾ ಚೌಧುರಿ ನೇತೃತ್ವದಲ್ಲಿ ತನಿಖೆ ನಡೆಸಿ ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.