ದಿನಗೂಲಿ ಕಾರ್ಮಿಕನಿಗೆ 1.5 ಕೋಟಿ ರೂ. ತೆರಿಗೆ ಪಾವತಿಸುವಂತೆ ಐಟಿ ನೋಟಿಸ್!
ಥಾಣೆ: ಇಲ್ಲಿನ ಅಂಬಿವಲಿ ಕೊಳಗೇರಿಯಲ್ಲಿ ವಾಸವಾಗಿರುವ ದಿನಗೂಲಿ ಕಾರ್ಮಿಕ ಭಾವುಸಾಹೇಬ್ ಅಹಿರೆ ದಿನವೊಂದಕ್ಕೆ ಗಳಿಸುವ ಕೂಲಿ ಕೇವಲ ರೂ 300. ಆದರೆ ಅಚ್ಚರಿಯೆಂಬಂತೆ ಅವರಿಗೆ ಐಟಿ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ. ನೋಟ್ ಬ್ಯಾನ್ ವೇಳೇ ತನ್ನ ಖಾತೆಯಲ್ಲಿ ಠೇವಣಿಯಿರಿಸಿದ್ದಾನೆಂದು ಹೇಳಲಾದ 58 ಲಕ್ಷ ರೂ. ಹಣಕ್ಕೆ ರೂ 1.05 ಕೋಟಿ ತೆರಿಗೆ ಪಾವತಿಸಬೇಕೆಂದು ಐಟಿ ನೋಟಿಸ್ ಹೇಳಿದೆ.
ಈ ನೋಟಿಸ್ ಸಿಕ್ಕಿದೊಡನೆ ಭಾವುಸಾಹೇಬ್ ಪೊಲೀಸ್ ಠಾಣೆಗೆ ಧಾವಿಸಿ ತನಗೇನೂ ಗೊತ್ತಿಲ್ಲ ಎಂದು ಅಲವತ್ತುಕೊಂಡಿದ್ದಾನೆ. ನಕಲಿ ದಾಖಲೆ ಮೂಲಕ ಬೇರೆ ಯಾರಾದರೂ ಖಾತೆ ತೆರೆದಿರಬಹುದೆಂದೂ ಆತ ಪೊಲೀಸರಿಗೆ ಹೇಳಿದ್ದಾನೆ.
ತನ್ನ ಮಾವನ ಜತೆ ಆತನ ಗುಡಿಸಲಿನಲ್ಲಿ ವಾಸವಾಗಿರುವ ಭಾವುಸಾಹೇಬ್ ಗೆ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ನೋಟಿಸ್ ಬಂದಿತ್ತು. ಆಗ ಆತ ಐಟಿ ಕಚೇರಿ ಹಾಗೂ ತನ್ನ ಖಾತೆಯಿರುವ ಖಾಸಗಿ ಬ್ಯಾಂಕ್ ಗೆ ಹೋಗಿದ್ದ. ತನ್ನ ಪ್ಯಾನ್ ಸಂಖ್ಯೆ ಇತ್ತಾದರೂ ಖಾತೆಯಲ್ಲಿ ಬೇರೆ ಫೋಟೋ ಹಾಗೂ ಫೋರ್ಜರಿ ಸಹಿ ಇದ್ದುದನ್ನು ಗಮನಿಸಿದ್ದ.
ಜನವರಿ 7ರಂದು ಎರಡನೇ ನೋಟಿಸಿನಲ್ಲಿ ರೂ 1.05 ಕೋಟಿ ತೆರಿಗೆ ಪಾವತಿಸಬೇಕೆಂದು ಸೂಚಿಸಿದ್ದನ್ನು ಕಂಡು ಕಂಗಾಲಾಗಿ ಆತ ಪೊಲೀಸ್ ದೂರು ನೀಡಿದ್ದಾನೆ.