ಮುಂಬೈ ಇನ್ನು ನಿದ್ದೆ ಮಾಡುವುದಿಲ್ಲ!
ಮುಂಬೈ, ಜ.18: ಮೂರು ದಶಕಗಳ ಬಳಿಕ ಮುಂಬೈ ನಗರ ಸದಾ ಎಚ್ಚರವಾಗಿರಲು ಸ್ವಾತಂತ್ರ್ಯ ಸಿಕ್ಕಿದೆ. ದಿನದ 24 ಗಂಟೆಯೂ ವಾಣಿಜ್ಯ ಮಳಿಗೆಗಳು ಕಾರ್ಯ ನಿರ್ವಹಿಸುವುದು ಸೇರಿದಂತೆ ದಿನವಿಡೀ ಚಟುವಟಿಕೆಗಳಿಗೆ ಬಿಡುವು ಇಲ್ಲ. ಈ ನೂತನ ವ್ಯವಸ್ಥೆ ಗಣರಾಜ್ಯೋತ್ಸವದಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.
ಎಲ್ಲ ರೆಸ್ಟೋರೆಂಟ್, ಮಾಲ್, ಮಲ್ಟಿಪ್ಲೆಕ್ಸ್, ಶಾಪಿಂಗ್ ಪ್ಲಾಝಾಗಳನ್ನು 23 ಗಂಟೆ ಕಾಲ ತೆರೆಯಲು ಅನುಮತಿ ನೀಡುವಂತೆ ಕೋರಿದ್ದ ಪ್ರಸ್ತಾವಕ್ಕೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಆದಿತ್ಯ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಇದರ ಅನ್ವಯ ಎಲ್ಲ ಸಮುದಾಯ ಪ್ರದೇಶಗಳ, ಭದ್ರತಾ ವ್ಯವಸ್ಥೆ, ಸಿಸಿಟಿವಿ, ಪಾರ್ಕಿಂಗ್ ಸ್ಥಳಾವಕಾಶ ಹೊಂದಿರುವ ವಾಸೇತರ ವಲಯಗಳು ಜನವರಿ 27ರಿಂದ ದಿನವಿಡೀ ತೆರೆದಿರುತ್ತವೆ. ಹಲವಾರು ಮಾಲ್ಗಳು ಮತ್ತು ಇತರ ಮಳಿಗೆಗಳು ಈ ವರ್ಗದಲ್ಲಿ ಬರುತ್ತವೆ. ಮುಂಬೈ ದಿನದ 24 ಗಂಟೆಯೂ ಸಕ್ರಿಯವಾಗಿರುವ ನಗರವಾಗಿರುವುದರಿಂದ ಇದು ಪ್ರವಾಸಿಗರ ಜತೆಗೆ ಜನರಿಗೂ ಪ್ರಯೋಜನವಾಗುವ ನಿರೀಕ್ಷೆ ಇದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಪ್ರವೀಣ್ ಪರದೇಶಿ ಹೇಳಿದ್ದಾರೆ.
ಇತರ ನಗರಗಳಲ್ಲಿ ಅಪರಿಮಿತ ಸ್ಥಳಾವಕಾಶ ಆದರೆ ಸೀಮಿತ ಸಕ್ರಿಯ ಗಂಟೆಗಳಿದ್ದರೆ, ಮುಂಬೈ ನಗರದ ವಿಸ್ತರಣೆಗೆ ಅವಕಾಶ ಸೀಮಿತ. ಆದ್ದರಿಂದ ಹೆಚ್ಚಿನ ಅವಧಿಗೆ ಮಳಿಗೆಗಳನ್ನು ತೆರೆಯುವ ಮೂಲಕ ಇರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಫುಡ್ಕೋರ್ಟ್ಗಳು ಕೂಡಾ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅವಕಾಶ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ. ಇದು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಜತೆಗೆ ಹೆಚ್ಚಿನ ವಹಿವಾಟು ಅವಕಾಶಕ್ಕೂ ಕಾರಣವಾಗಲಿದೆ ಎಂದರು.