ರಾಜಸ್ಥಾನ ಪಂಚಾಯತ್ ಸದಸ್ಯೆಯಾದ ಪಾಕ್ ಸಂಜಾತ ಮಹಿಳೆ
ಜೈಪುರ, ಜ.18: ರಾಜಸ್ಥಾನದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆಯ ಮೊದಲ ಹಂತದಲ್ಲಿ ಇತಿಹಾಸವೊಂದು ಸೃಷ್ಟಿಯಾಗಿದೆ. ಸಿಂಧ್ ಪ್ರಾಂತ್ಯದಿಂದ 18 ವರ್ಷಗಳ ಹಿಂದೆ ವಲಸೆ ಬಂದಿದ್ದ ಪಾಕಿಸ್ತಾನ ಮೂಲದ ಮಹಿಳೆ ನೀತಾ ಕನ್ವರ್ ಅವರು ಟೋಂಕ್ ಜಿಲ್ಲೆಯ ನಟ್ವಾರ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ!
ನೀತಾ ಕನ್ವರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸೋನಾ ದೇವಿಯವರನ್ನು 400 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಿಎಎ ಮತ್ತು ಎನ್ಆರ್ಸಿ ಬಗ್ಗೆ ದೇಶಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂ ಮಹಿಳೆ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದರು. ರಾಜ್ಯದಲ್ಲಿ 2,726 ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆದಿದ್ದು, 17 ಸಾವಿರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದಾಗ್ಯೂ ಪಾಕ್ ಮೂಲದ ಮಹಿಳೆ ಕಣದಲ್ಲಿದ್ದ ಹಿನ್ನೆಲೆಯಲ್ಲಿ ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು.
ಅಜ್ಮೀರ್ನ ಸೋಫಿಯಾ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಕನ್ವರ್, ರಜಪೂತ ಕುಟುಂಬದ ವ್ಯಕ್ತಿಯೊಂದಿಗೆ ವಿವಾಹವಾಗಿ ಐದು ತಿಂಗಳ ಹಿಂದೆ ಪೌರತ್ವ ಪಡೆದಿದ್ದರು. ಮೂರು ಬಾರಿ ಸರಪಂಚರಾಗಿದ್ದ ಮಾವ ಠಾಕೂರ್ ಲಕ್ಷ್ಮಣ್ ಕರಣ್ ಅವರಿಂದ ಸ್ಫೂರ್ತಿ ಪಡೆದ ಕನ್ವರ್ ಇದೀಗ ತಳಮಟ್ಟದ ಪ್ರಜಾಪ್ರಭುತ್ವದಲ್ಲಿ ಪಾತ್ರ ವಹಿಸಲಿದ್ದಾರೆ.
"ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕಾಗಿ ಗ್ರಾಮದ ಜನತೆಗೆ ಕೃತಜ್ಞತೆ ಹೇಳುತ್ತೇನೆ. ಅದರಲ್ಲೂ ಮುಖ್ಯವಾಗಿ ಮಾವ ನನಗೆ ಈ ಪ್ರಮುಖ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವು ನೀಡಿದರು" ಎಂದು ಕನ್ವರ್ ಬಣ್ಣಿಸಿದರು.
2011ರಲ್ಲಿ ವಿವಾಹವಾದ ಕನ್ವರ್ ಹಲವು ವಾರಗಳಿಂದ ಪ್ರಚಾರ ನಡೆಸಿದ್ದರದು. 8ನೇ ತರಗತಿವರೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಧ್ಯಯನ ಮಾಡಿದ್ದ ಕನ್ವರ್, ಬಳಿಕ ಸಹೋದರಿ ಹಾಗೂ ತಾಯಿ ಜತೆಗೆ ಭಾರತಕ್ಕೆ ಬಂದಿದ್ದರು. ತಂದೆ ಇನ್ನೂ ಪಾಕಿಸ್ತಾನದಲ್ಲಿ ಕೃಷಿಕ. ಠಾಕೂರ್ ಲಕ್ಷ್ಮಣ್ ಕರಣ್ ಅವರ ಮಗ ಪುಣ್ಯ ಪ್ರತಾಪ್ ಕರಣ್ ಜತೆ 2011ರಲ್ಲಿ ವಿವಾಹವಾದರೂ ಭಾರತೀಯ ಪೌರತ್ವ ಪಡೆಯಲು ಎಂಟು ವರ್ಷಗಳ ಸುದೀರ್ಘ ಹೋರಾಟ ನಡೆಸಿದ್ದರು. ಅಂತಿಮವಾಗಿ ಕಳೆದ ಸೆಪ್ಟಂಬರ್ನಲ್ಲಿ ಪೌರತ್ವ ಲಭಿಸಿತ್ತು.
ಮಹಿಳಾ ಶಿಕ್ಷಣ, ಆರೋಗ್ಯ ಮತ್ತು ಶಿಕ್ಷಣ ಸುಧಾರಣೆ, ಮಹಿಳೆಯರ ಸಬಲೀಕರಣ ಮತ್ತು ಗ್ರಾಮೀಣಾಭಿವೃದ್ಧಿ ನನ್ನ ಆದ್ಯತೆ ಎಂದು ನೀತಾ ಹೇಳಿದ್ದಾರೆ.