ಪ್ರತ್ಯೇಕ ಘಟನೆ: ಇಬ್ಬರು ಮಹಿಳೆಯರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ
ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಗ್ರಾಮವೊಂದರ ಹೊರವಲಯದಲ್ಲಿ ಮಂಚಕ್ಕೆ ಕಟ್ಟಿ ಹಾಕಲ್ಪಟ್ಟ ಸ್ಥಿತಿಯಲ್ಲಿದ್ದ ಮಹಿಳೆಯ ಸುಟ್ಟ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಮೂರು ಖಾಲಿ ಕಾಟ್ರಿಡ್ಜ್ ಕೂಡ ಪತ್ತೆಯಾಗಿವೆ. ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
"ಪೊಲೀಸರು ಡಿಎನ್ಎ ಮಾದರಿ ಸಂಗ್ರಹಿಸಿ ಈ ಮೂಲಕ ಆಕೆಯ ಗುರುತು ಹಚ್ಚಲು ಯತ್ನಿಸಲಿದ್ದಾರೆ'' ಎಂದು ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಿ ನಿವಾಸ್ ಮಿಶ್ರಾ ಹೇಳಿದ್ದಾರೆ. ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ನಡೆದಿದೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ.
ಇನ್ನೊಂದು ಆಘಾತಕಾರಿ ಘಟನೆಯಲ್ಲಿ ಪೂರ್ವ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಮುಖ ಸಂಪೂರ್ಣ ಕರಕಲಾಗಿದ್ದು, ಇದು ಆ್ಯಸಿಡ್ ದಾಳಿಯಿಂದ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ಆಕೆಯ ಮುಖ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ವಯಸ್ಸು ಸುಮಾರು 20 ಎಂದು ಅಂದಾಜಿಸಲಾಗಿದೆ. ತನಿಖೆ ಮುಂದುವರಿದಿದೆ.