ರಾಷ್ಟ್ರ ವಿರೋಧಿ ನಾಟಕ, ಹಾಡಿಗೆ ಅವಕಾಶವಿಲ್ಲ: ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ ಸೂಚನೆ
ಫೈಲ್ ಫೋಟೊ
ಮುಂಬೈ, ಜ.29: ಸಂಸ್ಥೆಯ ಆವರಣದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸಬಾರದು ಮತ್ತು ರಾಷ್ಟ್ರವಿರೋಧಿ ನಾಟಕ, ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಐಐಟಿ ಬಾಂಬೆ ಸೂಚನೆ ನೀಡಿದೆ.
ಮಂಗಳವಾರ ವಿದ್ಯಾರ್ಥಿ ವ್ಯವಹಾರ ವಿಭಾಗದ ಡೀನ್ ಹೊರಡಿಸಿರುವ 15 ಅಂಶಗಳ ಸುತ್ತೋಲೆಯಲ್ಲಿ , ಮುಂಬೈಯ ಪೊವೈಯಲ್ಲಿರುವ ಸಂಸ್ಥೆಯ ಆವರಣದಲ್ಲಿ ರಾಷ್ಟ್ರವಿರೋಧಿ ನಾಟಕ, ಗಾಯನಕ್ಕೆ ನಿಷೇಧ, ಡೀನ್ ಅನುಮತಿ ಇಲ್ಲದೆ ಹಾಸ್ಟೆಲ್ನಲ್ಲಿ ಯಾವುದೇ ಪೋಸ್ಟರ್, ಕೈಪಿಡಿ, ಪ್ಯಾಂಪ್ಲೆಟ್ಗಳನ್ನು ಹಂಚಲು ನಿಷೇಧ, ಹಾಸ್ಟೆಲ್ನ ಶಾಂತಿಗೆ ಭಂಗ ತರುವಂತಹ ಯಾವುದೇ ನಾಟಕ, ಸಂಗೀತ ಅಥವಾ ಇತರ ಕಾರ್ಯಕ್ರಮ ಆಯೋಜಿಸಬಾರದು(ಬೋಧಕ ವರ್ಗದವರು ಪ್ರೇಕ್ಷಕರಾಗಿರುವ ಕಾರ್ಯಕ್ರಮಕ್ಕೂ ಅನ್ವಯಿಸುತ್ತದೆ), ಖಾಸಗಿ/ ಕೃತಿ ಚೌರ್ಯ ಮಾಡಿದ/ಅನಧಿಕೃತ/ ಲೈಸೆನ್ಸ್ ಪಡೆದಿಲ್ಲದ ಸಿನೆಮಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಬಾರದು , ಪೀಠೋಪಕರಣ, ಗೋಡೆ, ಬಾಗಿಲು, ಕಿಟಕಿ ಮುಂತಾದವುಗಳ ಅಂದಗೆಡಿಸಬಾರದು - ಎಂದು ಸೂಚಿಸಲಾಗಿದೆ.
ವಿದ್ಯಾರ್ಥಿಗಳು ಹಾಸ್ಟೆಲ್ನ ಒಳಗೆ ಮತ್ತು ಹೊರಗೆ ಪರಸ್ಪರ ವಿನಯಪೂರ್ವಕವಾಗಿ, ಗೌರವಾದರದೊಂದಿಗೆ ವರ್ತಿಸಬೇಕು, ತಮ್ಮೊಂದಿಗೆ ಗುರುತು ಚೀಟಿ ಕೊಂಡೊಯ್ಯಬೇಕು ಮತ್ತು ಕೇಳಿದಾಗ ಅದನ್ನು ತೋರಿಸಬೇಕು, ಕ್ಯಾಂಪಸ್ನ ಒಳಗೆ ಧೂಮಪಾನ, ಮದ್ಯಪಾನ ಅಥವಾ ಮಾದಕ ವಸ್ತು ಸೇವಿಸಬಾರದು. ಅಲ್ಲದೆ ಅಮಲೇರಿದ ಸ್ಥಿತಿಯಲ್ಲಿ ಕ್ಯಾಂಪಸ್ ಪ್ರವೇಶಿಸಬಾರದು. ರ್ಯಾಗಿಂಗ್ ನಡೆಸುವುದು ಕ್ರಿಮಿನಲ್ ಕೃತ್ಯವಾಗಿದೆ. 10 ಗಂಟೆಯ ಬಳಿಕ ಹುಡುಗರ ಹಾಸ್ಟೆಲ್ನ ಕೋಣೆಯಲ್ಲಿ ಹುಡುಗಿಯರು ಅಥವಾ ಹುಡುಗಿಯರ ಕಾಸ್ಟೆಲ್ ಕೋಣೆಯಲ್ಲಿ ಇರುವಂತಿಲ್ಲ. ರಕ್ತಸಂಬಂಧಿಗಳಾದ ಸಹೋದರ, ಸಹೋದರಿ, ಹೆತ್ತವರು ಹಾಸ್ಟೆಲ್ ಕೋಣೆಯಲ್ಲಿ ರಾತ್ರಿ ಉಳಿದುಕೊಳ್ಳಬೇಕಿದ್ದರೆ ಡೀನ್ ಅನುಮತಿ ಪಡೆಯಬೇಕು ಹಾಗೂ ಗರಿಷ್ಟ 7 ದಿನಗಳವರೆಗೆ(ವೈದ್ಯಕೀಯ ಪ್ರಕರಣದಲ್ಲಿ ವಿಸ್ತರಿಸಬಹುದು) ಎಂದು ಸೂಚಿಸಲಾಗಿದೆ.
ಈ ಸುತ್ತೋಲೆಯ ಬಗ್ಗೆ ಅಸಮಾಧಾನ ಸೂಚಿಸಿರುವ ವಿದ್ಯಾರ್ಥಿಗಳು, ಇದು ತಮ್ಮ ಸ್ವಾತಂತ್ರ್ಯ ಮತ್ತು ಹಕ್ಕನ್ನು ಮೊಟಕುಗೊಳಿಸುವ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಆರೋಪವನ್ನು ನಿರಾಕರಿಸಿರುವ ಐಐಟಿಯ ವಕ್ತಾರರು, ಇದರಲ್ಲಿ ಹೊಸತೇನೂ ಇಲ್ಲ. ಈ ಕಾನೂನು ಹಿಂದಿನಿಂದಲೂ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.