ದಿಲ್ಲಿಯಲ್ಲಿ ವಿಜಯದ ಬಳಿಕ 10 ಲಕ್ಷ ಜನರು ಆಪ್ ಸೇರ್ಪಡೆ
ಹೊಸದಿಲ್ಲಿ, ಫೆ. 12: ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಬಳಿಕ ಆಮ್ ಆದ್ಮಿ ಪಕ್ಷಕ್ಕೆ 10 ಲಕ್ಷಕ್ಕಿಂತಲೂ ಅಧಿಕ ಜನರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಆಪ್ ಗುರುವಾರ ತಿಳಿಸಿದೆ.
‘‘ಪ್ರಚಂಡ ಜಯದ ಬಳಿಕ 24 ಗಂಟೆಗಳ ಒಳಗೆ 10 ಲಕ್ಷ ಜನರು ಸಾಮೂಹಿಕವಾಗಿ ಆಪ್ಗೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರಲು ಮಿಸ್ಸಡ್ ಕಾಲ್ ನೀಡಿ ಎಂದು ಹೇಳಲಾಗಿತ್ತು’’ ಎಂದು ಆಪ್ ಗುರುವಾರ ಬೆಳಗ್ಗೆ ತನ್ನ ಟ್ವೀಟ್ನಲ್ಲಿ ಹೇಳಿದೆ. ‘‘ಮಿಸ್ಡ್ ಕಾಲ್ ನೀಡುವ ಅಭಿಯಾನದಲ್ಲಿ ಸುಮಾರು 11 ಲಕ್ಷ ಜನರು ಪಾಲ್ಗೊಂಡಿದ್ದಾರೆ. ವಿವಿಧ ಮಾಧ್ಯಮಗಳ ಮೂಲಕ ಮಿಸ್ಡ್ ಕಾಲ್ ನೀಡಲು ನಂಬರ್ ನೀಡಲಾಗಿತ್ತು. ದೇಶ ಕಟ್ಟಲು ದೇಶಾದ್ಯಂತದ ಜನರು ನೀಡಿದ ಬೆಂಬಲ ಚಾರಿತ್ರಿಕ ವಿಚಾರ ಎಂದು ಪಕ್ಷದ ನಾಯಕರು ಪ್ರತಿಪಾದಿಸಿದ್ದಾರೆ’’ ಎಂದು ಆಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಿಜೆಪಿಯ ಎಲ್ಲ ಪ್ರಯತ್ನಗಳ ಹೊರತಾಗಿಯೂ ಆಪ್ ತನ್ನ ರಾಜಕೀಯ ಕಾರ್ಯದ ಪಥವನ್ನು ಬದಲಿಸಲಿಲ್ಲ. ದಿಲ್ಲಿಯ ಜನರು ಆಪ್ ಮೇಲೆ ಹಾಗೂ ಅದರ ಅಭಿವೃದ್ಧಿಯ ರಾಜಕಾರಣದ ಮೇಲೆ ನಂಬಿಕೆ ಇರಿಸಿದ್ದಾರೆ ಎಂದು ಆಪ್ ಹೇಳಿಕೆಯಲ್ಲಿ ತಿಳಿಸಿದೆ.