ಕೇಜ್ರಿವಾಲ್ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ಮೋದಿಗೆ ಆಹ್ವಾನ
ಹೊಸದಿಲ್ಲಿ, ಫೆ.14: ಫೆಬ್ರವರಿ 16ರಂದು ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ತನ್ನ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಆಹ್ವಾನ ನೀಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಪ್ರಧಾನಿ ಮೋದಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ ಎಂದು ಹಿರಿಯ ಮುಖಂಡ ಗೋಪಾಲ್ ರಾಯ್ ತಿಳಿಸಿದ್ದಾರೆ. ದಿಲ್ಲಿಯ ಎಲ್ಲಾ 7 ಸಂಸದರು ಹಾಗೂ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ 8 ಬಿಜೆಪಿ ಸದಸ್ಯರಿಗೂ ಆಹ್ವಾನ ಪತ್ರ ಕಳುಹಿಸಲಾಗಿದೆ. ಆದರೆ ಇತರ ರಾಜ್ಯಗಳ ಯಾವುದೇ ಮುಖ್ಯಮಂತ್ರಿಗಳಿಗೆ ಆಹ್ವಾನ ಕಳುಹಿಸಿಲ್ಲ . ಪ್ರಧಾನಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದವರು ಹೇಳಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದಿಲ್ಲಿಯ ಜನತೆಯನ್ನು ಆಹ್ವಾನಿಸಲು ಪತ್ರಿಕೆಯಲ್ಲಿ ಮುಖಪುಟದ ಜಾಹೀರಾತನ್ನು ಪ್ರಕಟಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Next Story