ಸಿಎಎ ವಿರುದ್ಧ 2 ಕೋಟಿಗೂ ಅಧಿಕ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ರವಾನೆ
ಚೆನ್ನೈ, ಫೆ.16: ಡಿಎಂಕೆ ನೇತೃತ್ವದ ಜಾತ್ಯಾತೀತ ಪ್ರಗತಿಪರ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪೌರತ್ವ ಕಾಯ್ದೆ ವಿರೋಧಿ ಸಹಿ ಸಂಗ್ರಹ ಅಭಿಯಾನದಡಿ 2 ಕೋಟಿಗೂ ಅಧಿಕ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಎಂಕೆ, ಕಾಂಗ್ರೆಸ್, ಎಂಡಿಎಂಕೆ ಸಹಿತ ವಿಪಕ್ಷಗಳ ಸದಸ್ಯರು ಫೆ.2ರಿಂದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಪೌರತ್ವ ಕಾಯ್ದೆ, ಎನ್ಪಿಆರ್ ಮತ್ತು ಎನ್ಆರ್ಸಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಡೆಸಲಾದ ಅಭಿಯಾನದಲ್ಲಿ 2 ಕೋಟಿಗೂ ಅಧಿಕ ಸಹಿ ಸಂಗ್ರಹಿಸಲಾಗಿದೆ. ಪೌರತ್ವ ಕಾಯ್ದೆ, ಎನ್ಪಿಆರ್ ಮತ್ತು ಎನ್ಆರ್ಸಿ ಕುರಿತು ಜನತೆ ಹೊಂದಿರುವ ಭಾವನೆಯನ್ನು ಈ ಸಹಿ ಪ್ರತಿಬಿಂಬಿಸಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ನಿಟ್ಟಿನಲ್ಲಿ ಪೌರತ್ವ ಕಾಯ್ದೆಯನ್ನು ಹಿಂಪಡೆಯಲು ರಾಷ್ಟ್ರಪತಿ ಶಿಫಾರಸು ಮಾಡುವ ಭರವಸೆ ಇದೆ ಎಂದು ಡಿಎಂಕೆಯ ಮೂಲಗಳು ತಿಳಿಸಿವೆ.
ಜನವರಿಯಲ್ಲಿ ನಡೆದಿದ್ದ ವಿರೋಧ ಪಕ್ಷಗಳ ಮುಖಂಡರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಹೇಳಿದ್ದರು.