ಜಾಮಿಯಾ ವಿದ್ಯಾರ್ಥಿಯ ಕೈಯ್ಯಲ್ಲಿನ ವ್ಯಾಲೆಟ್ ಅನ್ನು ಕಲ್ಲೆಂದು ತಪ್ಪಾಗಿ ಬಿಂಬಿಸಿದ ಮಾಧ್ಯಮಗಳು
ಹೊಸದಿಲ್ಲಿ : ಕಳೆದ ವರ್ಷ ಡಿ. 15ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ತಮ್ಮ ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಪ್ರವೇಶಿಸಿದ್ದಾರೆಂದು ತೋರಿಸುವ ಎಕ್ಸ್ ಕ್ಲೂಸಿವ್ ವೀಡಿಯೊವನ್ನು ಇಂಡಿಯಾ ಟುಡೇ ಟಿವಿ ವಾಹಿನಿ ಫೆ. 16ರಂದು ಪ್ರಸಾರ ಮಾಡಿತ್ತು.
ಇದೊಂದು ನೈಜ ವೀಡಿಯೊ ಎಂದೂ ಹೇಳಲಾಗಿತ್ತಲ್ಲದೆ ದಿಲ್ಲಿ ಪೊಲೀಸರ ವಿಶೇಷ ತನಿಖಾ ತಂಡಕ್ಕೂ ಹಸ್ತಾಂತರಿಸಲಾಗಿತ್ತು. ಪೊಲೀಸರು ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳತ್ತ ಲಾಠಿ ಬೀಸುತ್ತಿರುವ ಸಿಸಿಟಿವಿ ವೀಡಿಯೊ ದೃಶ್ಯಾವಳಿಗಳು ವೈರಲ್ ಆದ ನಂತರ ಈ ನಿರ್ದಿಷ್ಟ ವೀಡಿಯೊ ವನ್ನು ಪ್ರಸಾರ ಮಾಡಲಾಗಿತ್ತು.
ಇಂಡಿಯಾ ಟುಡೇ ಪ್ರಸಾರ ಮಾಡಿದ ನಂತರ ಬಹಳಷ್ಟು ಟಿವಿ ವಾಹಿನಿಗಳು ಅದೇ ವೀಡಿಯೊವನ್ನು ಪ್ರಸಾರ ಮಾಡಿ ವಿದ್ಯಾರ್ಥಿಗಳ ಕೈಗಳಲ್ಲಿ ಕಲ್ಲುಗಳಿದ್ದವು ಎಂದು ಹೇಳಿಕೊಂಡವು. ಟೈಮ್ಸ್ ಆಫ್ ಇಂಡಿಯಾ, ಮಿರರ್ ನೌ, ರಿಪಬ್ಲಿಕ್ ಭಾರತ್, ಟೈಮ್ಸ್ ನೌ, ದಿ ಖ್ವಿಂಟ್, ಡಿಎಎನ್ಎ, ಝೀ ನ್ಯೂಸ್, ಆಜ್ ತಕ್, ಇಂಡಿಯಾ ಟಿವಿ, ಎನ್ಡಿಟಿವಿ, ನ್ಯೂಸ್ ಚಾನಲ್ ಗಳು ಹಾಗೂ ವೆಬ್ ತಾಣಗಳಾದ ಒಪಿ ಇಂಡಿಯಾ ಹಾಗೂ ಸ್ವರಾಜ್ಯ ಕೂಡ ಇಂತಹುದೇ ವರದಿಗಳನ್ನು ಪ್ರಸಾರ ಮಾಡಿದ್ದವು.
ವಿದ್ಯಾರ್ಥಿಯೊಬ್ಬ ತನ್ನ ಎರಡಡೂ ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿದ್ದ ಎಂದು ಹೇಳಲಾಗಿತ್ತು.
ಆಲ್ಟ್ ನ್ಯೂಸ್ ಹೈಯರ್ ರೆಸೊಲ್ಯೂಶನ್ ವೀಡಿಯೊ ಬಳಸಿ ಅದೇ ವೀಡಿಯೊ ಪರಿಶೀಲಿಸಿದಾಗ ವಿದ್ಯಾರ್ಥಿಯ ಒಂದು ಕೈಯಲ್ಲಿ ವ್ಯಾಲೆಟ್ (ಪರ್ಸ್) ಹಾಗೂ ಇನ್ನೊಂದು ಕೈಯಲ್ಲಿ ಫೋನಿನಂತೆ ಕಾಣುವ ಚಪ್ಪಟೆಯ ವಸ್ತು ಕಂಡು ಬಂದಿದೆ. ವಿದ್ಯಾರ್ಥಿಯ ಬಲಗೈಯಲ್ಲಿ ಕಂದು ಬಣ್ಣದ ವ್ಯಾಲೆಟ್ ಹಾಗೂ ಎಡಗೈಯಲ್ಲಿ ಫೋನ್ನಂತೆ ಕಾಣುವ ವಸ್ತು ಇರುವುದು ಸ್ಪಷ್ಟವಾಗಿ ಈ ಹೈ ರೆಸೊಲ್ಯೂಶನ್ ವೀಡಿಯೊದಲ್ಲಿ ಕಾಣಿಸುತ್ತದೆ.
ವೀಡಿಯೊದಲ್ಲಿ ವಿದ್ಯಾರ್ಥಿ ಕೊಠಡಿ ಪ್ರವೇಶಿಸುವಾಗ ಎರಡು ಕೈಯಲ್ಲಿ ಎರಡು ವಸ್ತು ಇದ್ದರೂ 10 ಸೆಕೆಂಡುಗಳ ನಂತರ ಆತ ವೀಡಿಯೊದಲ್ಲಿ ಕಾಣಿಸದೆ ಮತ್ತೆ ಕಾಣಿಸಿಕೊಂಡಾಗ ಆತನ ಬಲಗೈಯಲ್ಲಿ ಏನೂ ಇರದೇ ಇದ್ದರೂ ಎಡಗೈಯಲ್ಲಿ ಕಂದು ಬಣ್ಣದ ವ್ಯಾಲೆಟ್ ಕಾಣಿಸುತ್ತದೆ.
ಕೃಪೆ : altnews