'ಜಾಗ ಖಾಲಿ ಮಾಡಿ': ಟ್ರಂಪ್ ಕಾರ್ಯಕ್ರಮ ನಡೆಯುವ ಸ್ಟೇಡಿಯಂ ಪಕ್ಕದ 45 ಸ್ಲಮ್ ಕುಟುಂಬಗಳಿಗೆ ನೋಟಿಸ್
ಅಹ್ಮದಾಬಾದ್: ಫೆಬ್ರವರಿ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ 'ನಮಸ್ತೇ ಟ್ರಂಪ್' ಕಾರ್ಯಕ್ರಮ ನಡೆಯಲಿರುವ ಮೊಟೇರಾ ಸ್ಟೇಡಿಯಂ ಪಕ್ಕದ ಕೊಳಗೇರಿಯಲ್ಲಿ ವಾಸವಾಗಿರುವ 45 ಕುಟುಂಬಗಳಿಗೆ ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಸೋಮವಾರ ತೆರವು ನೋಟಿಸ್ ಜಾರಿಗೊಳಿಸಿದೆ.
ಈ 45 ಕುಟುಂಬಗಳಲ್ಲಿ ಸುಮಾರು 200 ಸದಸ್ಯರಿದ್ದು ಅವರೆಲ್ಲಾ ನೋಂದಾಯಿತ ನಿರ್ಮಾಣ ಕಾರ್ಮಿಕರಾಗಿದ್ದಾರೆ. 'ನಮಸ್ತೇ ಟ್ರಂಪ್' ಕಾರ್ಯಕ್ರಮಕ್ಕಾಗಿ ತಾವು ಎರಡು ದಶಕಗಳಿಂದ ವಾಸಿಸುತ್ತಿರುವ ಜಾಗವನ್ನು ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ಸಂತ್ರಸ್ತರು ಹೇಳಿದ್ದಾರೆ. ಆದರೆ ಮುನಿಸಿಪಲ್ ಅಧಿಕಾರಿಗಳು ಮಾತ್ರ ತಾವು ನೀಡಿರುವ ನೋಟಿಸಿಗೂ ಟ್ರಂಪ್ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ.
ಅಮೆರಿಕಾದ ಅಧ್ಯಕ್ಷರು ಹಾದು ಹೋಗುವ ರಸ್ತೆ ಬದಿಯಲ್ಲಿರುವ ಸರನಿಯವಸ್ ಅಥವಾ ದೇವ್ ಸರನ್ ಕೊಳೆಗೇರಿಯನ್ನು ಮರೆಮಾಚುವ ಉದ್ದೇಶದಿಂದ ಮುನಿಸಿಪಲ್ ಆಡಳಿತ ಬೃಹತ್ ಗೋಡೆಯೊಂದನ್ನು ನಿರ್ಮಿಸಲು ಆರಂಭಿಸಿದ ಬೆನ್ನಿಗೇ ಈ ಕ್ರಮ ಕೈಗೊಳ್ಳಲಾಗಿದೆ.
ಇಲ್ಲಿ ವಾಸಿಸುವವರೆಲ್ಲರೂ ಮಜೂರ್ ಅಧಿಕಾರ್ ಮಂಚ್ನಲ್ಲಿ ನೋಂದಣಿ ಮಾಡಿಕೊಂಡವರಾಗಿದ್ದಾರೆ. ಅವರ ಗುಡಿಸಲುಗಳು ಸ್ಟೇಡಿಯಂನಿಂದ ಸುಮಾರು 1.5 ಕಿಮೀ ದೂರದಲ್ಲಿ ಸ್ಟೇಡಿಯಂಗೂ ವಿಸತ್-ಗಾಂಧಿನಗರ ಹೆದ್ದಾರಿಗೂ ಸಂಪರ್ಕಿಸುವ ರಸ್ತೆ ಬದಿಯಲ್ಲಿದೆ.
ಈ ಗುಡಿಸಲುಗಳಿರುವ ಸ್ಥಳ ಮುನಿಸಿಪಲ್ ಕಾರ್ಪೊರೇಶನ್ನಿಗೆ ಸೇರಿದ್ದು ಹಾಗೂ ನಗರ ಯೋಜನೆಯ ಭಾಗವಾಗಿದೆ. ಏಳು ದಿನಗಳೊಳಗೆ ಸ್ಥಳ ತೆರವುಗೊಳಿಸಬೇಕು. ಏನಾದರೂ ಮನವಿ ಮಾಡಲಿದ್ದರೆ ಬುಧವಾರದೊಳಗೆ ಮಾಡಬೇಕೆಂದು ನೋಟಿಸಿನಲ್ಲಿ ಹೇಳಲಾಗಿದೆ. ಈ ನೋಟಿಸಿನಲ್ಲಿ ಫೆಬ್ರವರಿ 11 ಎಂದು ನಮೂದಿಸಲಾಗಿದ್ದು ಅದನ್ನು ಗಣನೆಗೆ ತೆಗೆದುಕೊಂಡರೆ ಇಲ್ಲಿನ ನಿವಾಸಿಗಳು ಇಂದಿನೊಳಗೆ ಸ್ಥಳ ತೆರವುಗೊಳಿಸಬೇಕಿದೆ.
ಇಲ್ಲಿನ ನಿವಾಸಿಗಳು ನಗರ ಯೋಜನೆಯ ಭಾಗವಾಗಿರುವ ಸ್ಥಳವನ್ನು ಅತಿಕ್ರಮಿಸಿಕೊಂಡಿರುವುದರಿಂದ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ನೋಟಿಸ್ ಜಾರಿಗೊಳಿಸಿರುವ ಅಧಿಕಾರಿಯಾದ ಸಹಾಯಕ ನಗರಾಭಿವೃದ್ಧಿ ಅಧಿಕಾರಿ ಕಿಶೋರ್ ವರ್ಣ ಹೇಳಿದ್ದಾರೆ.