ರಸ್ತೆಯೇ ಇಲ್ಲ: ಗರ್ಭಿಣಿಯನ್ನು 18 ಕಿ.ಮೀ. ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಮಹಿಳೆಯರು
ಮನಾಲಿ: ಹಿಮಾಚಲ ಪ್ರದೇಶದ ಕುಲ್ಲು ಎಂಬ ಕುಗ್ರಾಮದಲ್ಲಿ ಸೂಕ್ತ ರಸ್ತೆ ಸೌಕರ್ಯವಿಲ್ಲದೆ ಮಹಿಳೆಯರ ಒಂದು ಗುಂಪು ಕುರ್ಚಿಯೊಂದಲ್ಲಿ ಗರ್ಭಿಣಿಯೊಬ್ಬರನ್ನು ಸುಮಾರು 18 ಕಿ.ಮೀ. ದೂರದ ತನಕ ಕಾಡುಮೇಡಿನ ಪ್ರದೇಶಗಳಲ್ಲಿ ಹೊತ್ತುಕೊಂಡೇ ಸಾಗಿ ಆಸ್ಪತ್ರೆ ತಲುಪಿದ ಘಟನೆ ವರದಿಯಾಗಿದೆ. ಈ ಕುರಿತಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರವಿವಾರ ಬೆಳಗ್ಗೆ ಕುಲ್ಲು ಎಂಬಲ್ಲಿನ ಗಡಪರ್ಲಿ ಪಂಚಾಯತಿನ ಶಕ್ತಿ ಗ್ರಾಮದ 27 ವರ್ಷದ ಸುನೀತಾ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಗ್ರಾಮದ ಪುರುಷರೆಲ್ಲರೂ ಕೆಲಸಕ್ಕೆ ಹೊರಟು ಹೋಗಿದ್ದರು. ಈ ನಿರ್ದಿಷ್ಟ ಪ್ರದೇಶದಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಹಾಗೂ ಆರೋಗ್ಯ ಸೇವಾ ಸೌಕರ್ಯವೂ ಇಲ್ಲದೇ ಇರುವುದರಿಂದ ಅನ್ಯ ದಾರಿಯಿಲ್ಲದೆ ಕುರ್ಚಿಯೊಂದರಲ್ಲಿ ಆಕೆಯನ್ನು ಹೊತ್ತುಕೊಂಡು ಸಾಗಿದರು. ಸುಮಾರು ಏಳು ಗಂಟೆ ಅವರು ಈ ರೀತಿ ಕ್ರಮಿಸಿದಾಗ ಕೆಲ ಪುರುಷರೂ ಅವರಿಗೆ ಸಹಾಯ ಮಾಡಿದರು.
ಬೆಳಿಗ್ಗೆ 8:45ಕ್ಕೆ ಗ್ರಾಮದಿಂದ ಹೊರಟ ಅವರು ಅಪರಾಹ್ನ 3:30ಕ್ಕೆ ನಿಹರ್ನಿ ಎಂಬಲ್ಲಿಗೆ ತಲುಪಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಆಕೆಯನ್ನು ಸೈಂಜ್ ಎಂಬಲ್ಲಿನ ಸಮುದಾಯ ಆರೋಗ್ಯ ಖೇಂದ್ರಕ್ಕೆ ಕರೆದೊಯ್ಯಲಾಯಿತು.
ಈ ಮಹಿಳೆಯರು ಸಾಗಿದ ಹಾದಿಯಲ್ಲಿ ಈ ಹಿಂದೆ ಹಲವು ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಇಲ್ಲಿ ಭೂಕುಸಿತ ಹಾಗೂ ಹಿಮಪಾತ ಸಾಮಾನ್ಯವಾಗಿದ್ದು ಜನವರಿ 19ರಂದು ಪೋಲಿಯೋ ಲಸಿಕೆ ಹಾಕಲು ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಕ್ತಿ ಗ್ರಾಮದ ಸಮೀಪ ಕಣಿವೆಗೆ ಬಿದ್ದು ಸಾವನ್ನಪ್ಪಿದ್ದರು.