ಮತ್ತೊಬ್ಬ ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಲಕ್ನೋ, ಫೆ. 19: ಮಹಿಳೆಯೋರ್ವರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಉತ್ತರಪ್ರದೇಶದ ಭಾಡೋಹಿಯ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಹಾಗೂ ಇತರ 6 ಮಂದಿಯ ವಿರುದ್ಧ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ (40) ಫೆಬ್ರವರಿ 10ರಂದು ಪ್ರಕರಣ ದಾಖಲಿಸಿದ್ದರು. 2017ರಲ್ಲಿ ಭಾದೋಹಿ ಶಾಸಕ ತ್ರಿಪಾಠಿ ಹಾಗೂ ಅವರ ಆರು ಮಂದಿ ಸಹವರ್ತಿಗಳು ತನ್ನನ್ನು ಒಂದು ತಿಂಗಳ ಕಾಲ ಹೊಟೇಲ್ನಲ್ಲಿ ಇರಿಸಿ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.
ಅನಂತರ ತಾನು ಗರ್ಭವತಿಯಾಗಿದ್ದೆ. ಆದರೆ, ಅವರು ಬಲವಂತವಾಗಿ ಗರ್ಭಪಾತ ಮಾಡಿಸಿದರು ಎಂದು ಮಹಿಳೆ ದೂರಿನಲ್ಲಿ ಆಪಾದಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣವನ್ನು ಪೊಲೀಸ್ ಉಪ ಅಧೀಕ್ಷಕ ರವೀಂದ್ರ ವರ್ಮಾ ಅವರಿಗೆ ಹಸ್ತಾಂತರಿಸಲಾಗಿದೆ. ಅವರು ವರದಿ ಸಲ್ಲಿಸಿದ ಬಳಿಕ 7 ಮಂದಿಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಯಿತು ಅವರು ತಿಳಿಸಿದ್ದಾರೆ. ಮಹಿಳೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಅವರ ಮುಂದೆ ದಾಖಲಿಸಿಕೊಳ್ಳಲಾಗುವುದು. ಮುಂದಿನ ಕ್ರಮಗಳನ್ನು ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಸಿಂಗ್ ಹೇಳಿದ್ದಾರೆ.