ಲಾಕ್ಡೌನ್: ರಾಜ್ಯಗಳ ಅಭಿಪ್ರಾಯ ಕೋರಿದ ಕೇಂದ್ರ ಗೃಹ ಸಚಿವಾಲಯ
ಹೊಸದಿಲ್ಲಿ, ಎ.10: ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ನಿರ್ಬಂಧಗಳು ಇನ್ನೂ ಎರಡು ವಾರಗಳ ಕಾಲ ಮುಂದುವರಿಯುವ ಸಾಧ್ಯತೆಯ ಲಕ್ಷಣಗಳ ನಡುವೆಯೇ ಕೇಂದ್ರ ಗೃಹ ಸಚಿವಾಲಯವು 21 ದಿನಗಳ ಲಾಕ್ಡೌನ್ ಕುರಿತು ರಾಜ್ಯ ಸರಕಾರಗಳ ಅಭಿಪ್ರಾಯವನ್ನು ಕೋರಿದೆ.
ಮಾ.24ರಂದು ಘೋಷಿಸಲಾಗಿದ್ದ ಲಾಕ್ಡೌನ್ನ ಕಟ್ಟುನಿಟ್ಟಿನ ಜಾರಿಗಾಗಿ ಕೇಂದ್ರವು ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಗೃಹ ಸಚಿವಾಲಯವು ಮಾಹಿತಿಗಳನ್ನು ಒದಗಿಸಿದೆ.
ಲಾಕ್ಡೌನ್ನ ವಿವಿಧ ಮಗ್ಗಲುಗಳ ಬಗ್ಗೆ ಅಭಿಪ್ರಾಯಗಳನ್ನು ತಿಳಿಸುವಂತೆ ಹಾಗೂ ಇನ್ನಷ್ಟು ವರ್ಗಗಳ ಜನರಿಗೆ ಮತ್ತು ಸೇವೆಗಳಿಗೆ ನಿರ್ಬಂಧಗಳಿಂದ ವಿನಾಯಿತಿಗಳನ್ನು ನೀಡುವ ಅಗತ್ಯವಿದೆಯೇ ಎನ್ನುವುದನ್ನು ಸೂಚಿಸುವಂತೆ ಕೋರಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಬಿಹಾರ ಸೇರಿದಂತೆ ಕೆಲವು ರಾಜ್ಯ ಸರಕಾರಗಳು ಗೃಹ ಸಚಿವಾಲಯದ ಪತ್ರಕ್ಕೆ ಉತ್ತರಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಸಂಬಂಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದು ಅವು ಸೂಚಿರುವ ಸಲಹೆಗಳಲ್ಲಿ ಸೇರಿದೆ.