ಕೋವಿಡ್-19: ಔಷಧಿ ಪರೀಕ್ಷೆ, ಲಸಿಕೆ ಅಭಿವೃದ್ಧಿಗಾಗಿ ಕೇಂದ್ರದಿಂದ ಹೊಸ ಕಾರ್ಯಪಡೆ ರಚನೆ
ಹೊಸದಿಲ್ಲಿ,ಎ.19: ಕೊರೋನ ವೈರಸ್ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಗೊಳಿಸಲು ನಡೆಯುತ್ತಿರುವ ಕಾರ್ಯದ ಮೇಲೆ ನಿಗಾ ಇರಿಸಲು ಉನ್ನತ ಮಟ್ಟದ ಕಾರ್ಯಪಡೆಯೊಂದನ್ನು ಕೇಂದ್ರವು ರಚಿಸಿದೆ.
ಕಾರ್ಯಪಡೆಯು ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯದಲ್ಲಿ ಎಲ್ಲ ಸಚಿವಾಲಯಗಳು ಮಾಡಿರುವ ಕಾರ್ಯಗಳ ಸಮನ್ವಯವನ್ನು ತ್ವರಿತಗೊಳಿಸ ಲಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ನೀತಿ ಆಯೋಗದ ಸದಸ್ಯ(ಆರೋಗ್ಯ) ಮತ್ತು ಪ್ರಧಾನಿಗಳ ಪ್ರಧಾನ ವೈಜ್ಞಾನಿಕ ಸಲಹೆಗಾರರ ಜಂಟಿ ನೇತೃತ್ವದ ಕಾರ್ಯಪಡೆಯು ಆಯುಷ್, ಐಸಿಎಂಆರ್,ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,ಬಯೊಟೆಕ್ನಾಲಜಿ, ಸಿಎಸ್ಐಆರ್,ಡಿಆರ್ಡಿಒ,ಡಿಜಿಎಚ್ಎಸ್ ಮತ್ತು ಡಿಸಿಜಿಐನ ಪ್ರತಿನಿಧಿ ಗಳನ್ನು ಸದಸ್ಯರನ್ನಾಗಿ ಹೊಂದಿರಲಿದೆ ಎಂದು ಅದು ಹೇಳಿದೆ. ಬಯೊಟೆಕ್ನಾಲಜಿ ಇಲಾಖೆಯು ಲಸಿಕೆ ಅಭಿವೃದ್ಧಿಗೆ ನೋಡಲ್ ಏಜೆನ್ಸಿಯಾಗಿರಲಿದೆ.
ಕೋವಿಡ್-19 ರೋಗಿಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್ ಟ್ರಯಲ್ಗಾಗಿ ಐಸಿಎಂಆರ್ನ ಪ್ರಸ್ತಾವನೆಗೆ ಭಾರತದ ಔಷಧಿಗಳ ಮಹಾ ನಿಯಂತ್ರಕರು ಶನಿವಾರ ಹಸಿರು ನಿಶಾನೆ ತೋರಿಸಿದ್ದಾರೆ.