‘ಮೋದಿ ಒಳ್ಳೆಯ ಮೂಡ್ ನಲ್ಲಿಲ್ಲ’ ಎಂದ ಟ್ರಂಪ್: ಅಮೆರಿಕಾ ಅಧ್ಯಕ್ಷರ ಜೊತೆ ಮಾತುಕತೆಯೇ ನಡೆದಿಲ್ಲ ಎಂದ ಭಾರತ!
ಹೊಸದಿಲ್ಲಿ: ತಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದ್ದಾಗಿ ಹಾಗೂ “ಚೀನಾದಲ್ಲಿನ ವಿದ್ಯಮಾನಗಳಿಂದಾಗಿ ಅವರು ಒಳ್ಳೆಯ ಮೂಡ್ನಲ್ಲಿಲ್ಲ'' ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಕೆಲವೇ ಗಂಟೆಗಳಲ್ಲಿ ಭಾರತ ಸರಕಾರದ ಉನ್ನತ ಮೂಲಗಳು ಟ್ರಂಪ್ ಹೇಳಿಕೆಯನ್ನು ಅಲ್ಲಗಳೆದಿವೆಯಲ್ಲದೆ, ಎರಡೂ ದೇಶಗಳ ನಾಯಕರ ಜತೆಗೆ ಇತ್ತೀಚೆಗೆ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.
“ಇಬ್ಬರು ನಾಯಕರೂ ಕೊನೆಯ ಬಾರಿಗೆ ಮಾತುಕತೆಗಳನ್ನು ಹೈಡ್ರೊಕ್ಸಿಕ್ಲೊರೊಖ್ವಿನ್ ಕುರಿತಂತೆ ಎಪ್ರಿಲ್ 4, 2020ರಂದು ನಡೆಸಿದ್ದರು'' ಎಂದು ಮೂಲಗಳು ತಿಳಿಸಿವೆ.
“ಭಾರತವು ಚೀನಾದೊಂದಿಗೆ ರಾಜತಾಂತ್ರಿಕ ಸಂಪರ್ಕಗಳ ಮೂಲಕ ಹಾಗೂ ಇತರ ಕೆಲ ಸಮಯೋಚಿತ ವಿಧಾನಗಳ ಮೂಲಕ ನೇರ ಸಂಪರ್ಕದಲ್ಲಿದೆ ಎಂದು ಕೇಂದ್ರ ವಿದೇಶಾಂಗ ವ್ಯಹಾರಗಳ ಸಚಿವಾಲಯ ಗುರುವಾರವೇ ತಿಳಿಸಿದೆ'' ಎಂದು ಮೂಲಗಳು ಹೇಳಿವೆ.
ಭಾರತ ಮತ್ತು ಚೀನಾದ ನಡುವೆ ನಡೆಯುತ್ತಿರುವ ‘ದೊಡ್ಡ ಸಂಘರ್ಷ’ ಕುರಿತಂತೆ ತಾವು ಎರಡೂ ದೇಶಗಳ ನಡುವೆ ಸಂಧಾನ ನಡೆಸಲು ಸಿದ್ಧ ಎಂಬ ತಮ್ಮ ಈ ಹಿಂದಿನ ಆಫರ್ ಪುನರುಚ್ಛರಿಸುವ ವೇಳೆ ಟ್ರಂಪ್ ಅವರು ತಾವು ಪ್ರಧಾನಿ ಮೋದಿ ಜತೆ ಮಾತನಾಡಿದ್ದಾಗಿ ಹೇಳಿದ್ದರು
“ನಾನು ನಿಮಗೆ ಹೇಳಬಲ್ಲೆ. ನಾನು ಪ್ರಧಾನಿ ಮೋದಿ ಜತೆ ಮಾತನಾಡಿದೆ. ಚೀನಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತಂತೆ ಅವರು ಒಳ್ಳೆಯ ಮೂಡ್ನಲ್ಲಿಲ್ಲ'' ಎಂದು ಶ್ವೇತ ಭವನದಲ್ಲಿ ಟ್ರಂಪ್ ಹೇಳಿದರು. “ಅವರ ನಡುವೆ ದೊಡ್ಡ ಸಂಘರ್ಷವಿದೆ. ಎರಡು ದೇಶಗಳಲ್ಲೂ ತಲಾ 140 ಕೋಟಿ ಜನರಿದ್ದಾರೆ. ಎರಡು ದೇಶಗಳ ಬಳಿಯೂ ಪ್ರಬಲ ಮಿಲಿಟರಿಗಳಿವೆ. ಭಾರತ ಖುಷಿಯಾಗಿಲ್ಲ ಹಾಗೂ ಪ್ರಾಯಶಃ ಚೀನಾ ಕೂಡ ಖುಷಿಯಾಗಿಲ್ಲ'' ಎಂದು ಭಾರತ ಮತ್ತು ಚೀನಾ ದೇಶಗಳ ಗಡಿಯಲ್ಲಿನ ಪರಿಸ್ಥಿತಿಯ ಕುರಿತು ನಿಮಗೆ ಕಳವಳವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಟ್ರಂಪ್ ಹೇಳಿದ್ದಾರೆ.